Shubman Gill: ಏಕದಿನ ಸರಣಿಯಲ್ಲಿ ಮಿಂಚಿದ ಗಿಲ್ಗೆ ಆಂಗ್ಲರ ನಾಡಿನಿಂದ ಆಹ್ವಾನ; ಕೌಂಟಿ ಕ್ರಿಕೆಟ್ನತ್ತ ಶುಭ್‌ಮನ್ ಚಿತ್ತ
Shubman Gill: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಿಲ್ 102.50 ಸರಾಸರಿಯಲ್ಲಿ 205 ರನ್ ಮತ್ತು ಜಿಂಬಾಬ್ವೆ ವಿರುದ್ಧ 122.50 ಸರಾಸರಿಯಲ್ಲಿ 245 ರನ್ ಗಳಿಸಿದ್ದಾರೆ.
ಭಾರತದ ಮತ್ತೊಬ್ಬ ಶ್ರೇಷ್ಠ ಆಟಗಾರ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಈಗಾಗಲೇ ಕೆಲವು ಭಾರತೀಯ ಕ್ರಿಕೆಟಿಗರು ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದು, ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ (Shubman Gill) ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ. ಗ್ಲಾಮೊರ್ಗಾನ್ ತಂಡದೊಂದಿಗೆ ಗಿಲ್ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭಿಸಿದೆ. ಎಲ್ಲವೂ ಸರಿಯಾಗಿ ನಡೆದರೆ, ಈ ಸೀಸನ್ನ ಕೌಂಟಿ ಕ್ರಿಕೆಟ್ ಆಡುವ ಏಳನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶುಭ್‌ಮನ್ ಗಿಲ್ ಪಾತ್ರರಾಗಲಿದ್ದಾರೆ. ಚೇತೇಶ್ವರ್ ಪೂಜಾರ, ವಾಷಿಂಗ್ಟನ್ ಸುಂದರ್ ಲಂಕಾಶೈರ್, ಕೃಣಾಲ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಇಬ್ಬರೂ (ವಾರ್ವಿಕ್‌ಶೈರ್), ಉಮೇಶ್ ಯಾದವ್ (ಮಿಡಲ್‌ಸೆಕ್ಸ್) ಮತ್ತು ನವದೀಪ್ ಸೈನಿ (ಕೆಂಟ್) ತಂಡದ ಪರ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ರವಿಶಾಸ್ತ್ರಿ ನಂತರ, ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗಾನ್ ಪರ ಆಡಿದ ಮೂರನೇ ಭಾರತೀಯ ಕ್ರಿಕೆಟಿಗ ಶುಭ್‌ಮನ್ ಗಿಲ್. ರವಿಶಾಸ್ತ್ರಿ 1987 ಮತ್ತು 1991 ರ ನಡುವೆ ಗ್ಲಾಮೊರ್ಗಾನ್ ಪರ ಕೌಂಟಿ ಕ್ರಿಕೆಟ್ ಆಡಿದ್ದರು. ಸೌರವ್ ಗಂಗೂಲಿ 2005 ರಲ್ಲಿ ಈ ತಂಡಕ್ಕಾಗಿ ಆಡಿದ್ದರು. ಗಿಲ್ ಪ್ರಸ್ತುತ ಪ್ರಚಂಡ ಫಾರ್ಮ್‌ನಲ್ಲಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಿದ್ದಾರೆ.
ಏಕದಿನ ಸರಣಿಯಲ್ಲಿ ಗಿಲ್ ಪ್ರದರ್ಶನ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಿಲ್ 102.50 ಸರಾಸರಿಯಲ್ಲಿ 205 ರನ್ ಮತ್ತು ಜಿಂಬಾಬ್ವೆ ವಿರುದ್ಧ 122.50 ಸರಾಸರಿಯಲ್ಲಿ 245 ರನ್ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ಶುಭಮನ್ ಗಿಲ್ ಐಪಿಎಲ್‌ನಿಂದಲೂ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದು, ಭವಿಷ್ಯದ ಟೀಂ ಇಂಡಿಯಾ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಗಿಲ್ ಈಗಿನಿಂದಲೇ ತೋರಿಸಲು ಆರಂಭಿಸಿದ್ದಾರೆ.
ಗಿಲ್ ಟೆಸ್ಟ್ ಬದುಕು
ಶುಭಮನ್ ಗಿಲ್ ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 579 ರನ್ ಗಳಿಸಿದ್ದಾರೆ. ಜುಲೈನಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಗಿಲ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಟೆಸ್ಟ್ ಪಂದ್ಯದಲ್ಲಿ ಗಿಲ್, ಎರಡೂ ಇನ್ನಿಂಗ್ಸ್‌ಗಳಲ್ಲಿ 17 ಮತ್ತು 4 ರನ್ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಭಾರತ ಸೋತಿತ್ತು. ಪಂಜಾಬ್ ಪರ 12 ರಣಜಿ ಪಂದ್ಯಗಳನ್ನು ಆಡಿರುವ ಗಿಲ್, ಇದರಲ್ಲಿ 65.33ರ ಸರಾಸರಿಯಲ್ಲಿ 1176 ರನ್ ಗಳಿಸಿದ್ದಾರೆ. ಸದ್ಯಕ್ಕೆ ಗ್ಲಾಮೊರ್ಗಾನ್ ತಂಡ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದು, 10 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದೆ. ಗ್ಲಾಮೊರ್ಗಾನ್ ತಂಡಕ್ಕೆ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇದ್ದು, ಸೆಪ್ಟೆಂಬರ್ 5 ರಂದು ಕಾರ್ಡಿಫ್‌ನಲ್ಲಿ ವೋರ್ಸೆಸ್ಟರ್‌ಶೈರ್ ವಿರುದ್ಧ ಸೀಸನ್ ಆರಂಭಿಸಿದಲಿದೆ.
Published On - 4:32 pm, Thu, 25 August 22