7 ವರ್ಷಗಳಿಂದ ಗೆಲುವು ಮರೀಚಿಕೆ… 2ನೇ ಬಾರಿ ಬಾಝ್​ಬಾಲ್ ಬೌಲ್ಡ್​

India vs England: ಟೆಸ್ಟ್ ಕ್ರಿಕೆಟ್​ನಲ್ಲಿ ಬಾಝ್​ಬಾಲ್ ಆಟದೊಂದಿಗೆ ಸಂಚಲನ ಸೃಷ್ಟಿಸಿರುವ ಇಂಗ್ಲೆಂಡ್ ತಂಡವು ಕಳೆದ 7 ವರ್ಷಗಳಿಂದ ಟೆಸ್ಟ್ ಸರಣಿ ಗೆದ್ದಿಲ್ಲ. ಅದರಲ್ಲೂ ಎರಡು ಬಾರಿ ಬಾಝ್​ಪಡೆ ಭಾರತದ ವಿರುದ್ಧ ಮಂಡಿಯೂರಿದೆ. 2023 ರಲ್ಲಿ ನಡೆದ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಸೋತಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಈ ಬಾರಿ ಟೀಮ್ ಇಂಡಿಯಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

7 ವರ್ಷಗಳಿಂದ ಗೆಲುವು ಮರೀಚಿಕೆ... 2ನೇ ಬಾರಿ ಬಾಝ್​ಬಾಲ್ ಬೌಲ್ಡ್​
Ind Vs Eng

Updated on: Aug 05, 2025 | 10:05 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಶುರುವಾಗಿ 93 ವರ್ಷಗಳಾಗಿವೆ. 1932 ರಿಂದ ಆರಂಭವಾದ ಉಭಯ ತಂಡಗಳ ನಡುವಣ ಕ್ರಿಕೆಟ್​ ಕದನದಲ್ಲಿ ಮೊದಲ ಗೆಲುವು ದಾಖಲಿಸಲು ಟೀಮ್ ಇಂಡಿಯಾ ತೆಗೆದುಕೊಂಡಿದ್ದು ಬರೋಬ್ಬರಿ 20 ವರ್ಷಗಳು. ಅಂದರೆ 1952 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಜಯ ಸಾಧಿಸಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿತ್ತು. ಇನ್ನು ಆಂಗ್ಲರ ವಿರುದ್ಧ ಸರಣಿ ಗೆಲ್ಲಲು ಟೀಮ್ ಇಂಡಿಯಾ ಬರೋಬ್ಬರಿ 30 ವರ್ಷಗಳವರೆಗೆ ಕಾಯಬೇಕಾಗಿ ಬಂತು.

1962 ರಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದ್ದರು. ಅಂದು ಭಾರತ ತಂಡವನ್ನು ಮುನ್ನೆಡೆಸಿದ ನಾಯಕ ನಾರಿ ಕಾಂಟ್ರಾಕ್ಟರ್. ಇದಾದ ಬಳಿಕ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಹಲವು ಏರಿಳಿತಗಳು ಕಂಡಿದೆ.

ಹಲವು ಬಾರಿ ಇಂಗ್ಲೆಂಡ್ ಜಯ ಸಾಧಿಸಿದರೆ, ಇನ್ನು ಕೆಲವು ಭಾರತ ಗೆಲುವು ದಾಖಲಿಸಿದೆ. ಅದರಲ್ಲೂ 2011 ರಿಂದ ಇಂಗ್ಲೆಂಡ್ ಸತತ ಮೂರು ಬಾರಿ ಟೀಮ್ ಇಂಡಿಯಾ ವಿರುದ್ಧ ಸರಣಿ ಜಯಸಿತ್ತು. ಆದರೆ ವಿರಾಟ್ ಕೊಹ್ಲಿ ನಾಯಕರಾದ ಬಳಿಕ ಈ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬಿತ್ತು.

2014ರ ಬಳಿಕ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಸರಣಿ ಗೆದ್ದಿರುವುದು ಒಮ್ಮೆ ಮಾತ್ರ. ಅದು ಸಹ 2018 ರಲ್ಲಿ. ಇದಾದ ಬಳಿಕ ಭಾರತದಲ್ಲಾಗಲಿ, ಇಂಗ್ಲೆಂಡ್​ನಲ್ಲಾಗಲಿ ಟೀಮ್ ಇಂಡಿಯಾ ವಿರುದ್ಧ ಸರಣಿ ಗೆಲ್ಲಲು ಆಂಗ್ಲರಿಗೆ ಸಾಧ್ಯವಾಗಿಲ್ಲ.

ಅದರಲ್ಲೂ ಬಾಝ್​ಬಾಲ್ ಆಟದೊಂದಿಗೆ ಹೊಸ ಸಂಚಲನ ಸೃಷ್ಟಿಸಿರುವ ಇಂಗ್ಲೆಂಡ್ ಇನ್ನು ಸಹ ಟೀಮ್ ಇಂಡಿಯಾ ವಿರುದ್ಧ ಸರಣಿ ಗೆದ್ದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. 2021 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯು 2-2 ರ ಅಂತರದಲ್ಲಿ ಕೊನೆಗೊಂಡಿತ್ತು.

ಇದಾದ ಬಳಿಕ ಬಾಝ್​ಬಾಲ್ ಪಡೆಯೊಂದಿಗೆ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಬಂದ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ 4-1 ಅಂತರದಿಂದ ಮಣಿಸಿ ಹೊಸ ಇತಿಹಾಸ ಬರೆದಿದ್ದರು.

ಇದಾಗ್ಯೂ ಈ ಬಾರಿ ತವರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಯಂಗ್ ಇಂಡಿಯಾದ ಕೆಚ್ಚೆದೆಯ ಪ್ರದರ್ಶನದ ಮುಂದೆ ಇಂಗ್ಲೆಂಡ್ ತಂಡವು ಮಕಾಡೆ ಮಲಗಿದೆ. ಅದು ಕೂಡ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದ ಬಳಿಕ ಎಂಬುದು ವಿಶೇಷ.

ಅಂದರೆ ಈ ಬಾರಿಯ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್​ಗಳ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ದ್ವಿತೀಯ ಪಂದ್ಯದಲ್ಲಿ ಬರೋಬ್ಬರಿ 336 ರನ್​ಗಳ ಅಮೋಘ ವಿಜಯದೊಂದಿಗೆ ಭಾರತೀಯ ಪಡೆ ಆಂಗ್ಲರಿಗೆ ಬಿಗ್ ಶಾಕ್ ನೀಡಿದ್ದರು. ಇನ್ನು ಮೂರನೇ ಟೆಸ್ಟ್​ನಲ್ಲಿ 22 ರನ್​ಗಳ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು.

2-1 ಅಂತರದಿಂದ ಮುನ್ನಡೆ ಸಾಧಿಸಿದ ಇಂಗ್ಲೆಂಡ್ ಮುಂದಿನ 2 ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಟೀಮ್ ಇಂಡಿಯಾ ಡ್ರಾ ಸಾಧಿಸಿತು. ಈ ಡ್ರಾನೊಂದಿಗೆ ಅಂತಿಮ ಪಂದ್ಯವು ಸರಣಿ ನಿರ್ಣಾಯಕ ಮ್ಯಾಚ್ ಆಗಿ ಮಾರ್ಪಟ್ಟಿತ್ತು.

ಅದರಂತೆ ಕೊನೆಯ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಇಂಗ್ಲೆಂಡ್​ಗೆ ಟೀಮ್ ಇಂಡಿಯಾ ಬೌಲರ್​ಗಳು ಆಘಾತ ನೀಡಿದ್ದಾರೆ. ಅದರಲ್ಲೂ ಕೊನೆಯ ದಿನದಾಟದಲ್ಲಿ ಕೇವಲ 35 ರನ್​ಗಳ ಗುರಿ ಹೊಂದಿದ್ದ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಕೇವಲ 6 ರನ್​ಗಳ ರೋಚಕ ಜಯ ಸಾಧಿಸಿದ್ದಾರೆ.

ಇದನ್ನೂ ಓದಿ: 93 ವರ್ಷಗಳಲ್ಲೇ ಇದೇ ಮೊದಲ ಬಾರಿ… ಇದು ಟೀಮ್ ಇಂಡಿಯಾದ ಅಂತಿಂಥ ಗೆಲುವಲ್ಲ..!

ಈ ಮೂಲಕ 7 ವರ್ಷಗಳ ಬಳಿಕ ಭಾರತದ ವಿರುದ್ಧದ ಸರಣಿ ಗೆಲ್ಲುವ ಇಂಗ್ಲೆಂಡ್ ಆಸೆಗೆ ತಣ್ಣೀರೆರಚುವಲ್ಲಿ ಯಂಗ್ ಇಂಡಿಯಾ ಯಶಸ್ವಿಯಾಗಿದ್ದಾರೆ. ಇನ್ನು ಆಂಗ್ಲರು ಭಾರತದ ವಿರುದ್ಧ ಟೆಸ್ಟ್ ಸರಣಿ ಗೆಲ್ಲಬೇಕಿದ್ದರೆ 2027 ರವರೆಗೆ ಕಾಯಲೇಬೇಕು. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ನಡೆಯುವುದು 2 ವರ್ಷಗಳಿಗೊಮ್ಮೆ..!

 

 

Published On - 10:03 am, Tue, 5 August 25