
ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದ (ಸ್ಲೋ ಓವರ್-ರೇಟ್) ಕಾರಣಕ್ಕಾಗಿ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರಿ ದಂಡ ವಿಧಿಸಿದೆ. ಪಂದ್ಯದಲ್ಲಿ 8 ಓವರ್‌ಗಳನ್ನು ಕಡಿಮೆ ಬೌಲ್ ಮಾಡಿದ ಪರಿಣಾಮವಾಗಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಪಾಕಿಸ್ತಾನದ 8 ಅಂಕಗಳನ್ನು ಕಡಿತಗೊಳಿಸಲಾಗಿದೆ.
ಅಂದರೆ ಪಾಕಿಸ್ತಾನ್ ತಂಡವು ಬರೋಬ್ಬರಿ 8 ಅಂಕಗಳನ್ನು ಕಳೆದುಕೊಂಡಿದೆ. ಹೀಗೆ ಅಂಕ ಕಳೆದುಕೊಂಡಿರುವುದು ನಿಯಮ ಗೊತ್ತಿಲ್ಲದೇ ಎಂಬುದು ವಿಶೇಷ. ಏಕೆಂದರೆ 5 ದಿನಗಳ ಪಂದ್ಯದಲ್ಲಿ ಪಾಕ್ ತಂಡವು ಒಮ್ಮೆಯೂ ಸ್ಲೋ ಓವರ್ ತಪ್ಪನ್ನು ಸರಿಪಡಿಸಲು ಮುಂದಾಗಲಿಲ್ಲ. ಇದರಿಂದಾಗಿಯೇ 8 ಅಂಕಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಟೆಸ್ಟ್ ಪಂದ್ಯಗಳಲ್ಲಿ ನಿಗದಿತ ಸಮಯದೊಳಗೆ ಓವರ್‌ಗಳನ್ನು ಮುಗಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಓವರ್ ಮುಗಿಸದಿದ್ದರೆ…
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಪಂದ್ಯವು ಐದು ದಿನಗಳ ಕಾಲ ನಡೆದಿತ್ತು. ಈ ವೇಳೆ ಎರಡು ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಪಾಕಿಸ್ತಾನ್ ತಂಡವು ನಿಗದಿತ ಸಮಯಕ್ಕಿಂತ 8 ಓವರ್‌ಗಳಷ್ಟು ಹಿಂದೆ ಇತ್ತು. ಅಂದರೆ ಮೊದಲ ಇನಿಂಗ್ಸ್ನಲ್ಲಿ ಮಾಡಲಾದ ಸ್ಲೋ ಓವರ್ ರೇಟ್ ತಪ್ಪನ್ನು ದ್ವಿತೀಯ ಇನಿಂಗ್ಸ್ ವೇಳೆ ಸರಿಪಡಿಸಿಕೊಳ್ಳಬೇಕೆಂಬುದೇ ಪಾಕ್ ತಂಡಕ್ಕೆ ಗೊತ್ತಿರಲಿಲ್ಲ.
ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮಗಳ ಪ್ರಕಾರ, ಪ್ರತಿ ಸ್ಲೋ ಓವರ್ ರೇಟ್ಗೆ, ಅಂದರೆ ಪ್ರತಿ ಓವರ್‌ಗೆ ಒಂದೊಂದು ಅಂಕಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಪರಿಣಾಮ ಒಂದೇ ಪಂದ್ಯದ ಮೂಲಕ ಒಟ್ಟು 8 ಅಂಕಗಳನ್ನು ಕಳೆದುಕೊಂಡಿದ್ದಾರೆ.
ಒಂದು ವೇಳೆ ಮೊದಲ ಇನಿಂಗ್ಸ್ನಲ್ಲಿನ ಸ್ಲೋ ಓವರ್ ರೇಟ್ ತಪ್ಪನ್ನು ದ್ವಿತೀಯ ಇನಿಂಗ್ಸ್ನಲ್ಲಿ ಸರಿಪಡಿಸಿದ್ದರೆ, ಅಂದರೆ ಬೇಗನೆ ಓವರ್ ಮಾಡಿ ಮುಗಿಸಿದ್ದರೆ ಅಂಕ ಕಡಿತದಿಂದ ಪಾರಾಗಬಹುದಿತ್ತು. ಇಲ್ಲ ಕಡಿಮೆ ಅಂಕಗಳ ಕಡಿತವನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು.
ಆದರೆ ಬಾಂಗ್ಲಾದೇಶ್ ವಿರುದ್ಧ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ್ ತಂಡದ ಆಟಗಾರರು ಬೌಲಿಂಗ್ ವೇಳೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಇದರಿಂದ ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಇದೀಗ ಅಂಕಗಳ ಕಡಿತದೊಂದಿಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದಾರೆ.
ಈ ಅಂಕಗಳ ಕಡಿತದೊಂದಿಗೆ ಪಾಕಿಸ್ತಾನ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇವಲ 4 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ತಂಡದ ಜೊತೆಗೆ ಅಂಕಪಟ್ಟಿಯ ಕೊನೆಯ ಸ್ಥಾನಗಳಿಗೆ ಕುಸಿದಿದ್ದು, ಮುಂಬರುವ WTC ಫೈನಲ್ ರೇಸ್‌ನಿಂದ ಹೊರಬೀಳುವ ಆತಂಕ ಎದುರಾಗಿದೆ.
ಇದನ್ನೂ ಓದಿ: IPL ಫೈನಲ್ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ!
ಒಟ್ಟಾರೆಯಾಗಿ ಹೇಳುವುದಾದರೆ, ಆಧುನಿಕ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟಿಂಗ್-ಬೌಲಿಂಗ್ ಅಷ್ಟೇ ಅಲ್ಲ, ಸಮಯದ ನಿರ್ವಹಣೆಯೂ ಪಂದ್ಯದ ಫಲಿತಾಂಶವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ನಿಯಮಗಳ ಅರಿವಿಲ್ಲದೆ ಅಥವಾ ನಿರ್ಲಕ್ಷ್ಯದಿಂದಾಗಿ ಪಾಕಿಸ್ತಾನ 8 ಪ್ರಮುಖ ಅಂಕಗಳನ್ನು ಕಳೆದುಕೊಂಡಿರುವುದು ಅದರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕನಸಿಗೆ ಭಾರಿ ಪೆಟ್ಟು ನೀಡಿದೆ. ಮುಂದಿನ ಪಂದ್ಯಗಳಲ್ಲಾದರೂ ಪಾಕಿಸ್ತಾನ ತಂಡ ಈ ತಪ್ಪುಗಳಿಂದ ಪಾಠ ಕಲಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.