SMAT 2022: ಸಿಡಿಲಬ್ಬರದ ಸೆಂಚುರಿ ಸಿಡಿಸಿ ಮಿಂಚಿದ ರುತುರಾಜ್ ಗಾಯಕ್ವಾಡ್
SMAT 2022: ಸ್ಪರ್ಧಾತ್ಮಕ ಗುರಿ ಪಡೆದ ಕೇರಳ ಪರ ರೋಹನ್ (58) ಉತ್ತಮ ಆರಂಭ ಒದಗಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
Syed Mushtaq Ali Trophy 2022: ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Gaikwad). ಕೇರಳ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ರುತುರಾಜ್ ಹಾಗೂ ಪವನ್ ಶಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 84 ರನ್ಗಳ ಜೊತೆಯಾಟವಾಡಿದ ಈ ಜೋಡಿಯು ಬೃಹತ್ ಮೊತ್ತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಈ ಹಂತದಲ್ಲಿ ಪವನ್ ಶಾ (31) ಔಟಾದರೆ, ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ ಶೂನ್ಯಕ್ಕೆ ಬೌಲ್ಡ್ ಆದರು. ಆ ಬಳಿಕ ಆಝಿಂ (14) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರುತುರಾಜ್ ಕೇರಳ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಯುವ ದಾಂಡಿಗನ ಬ್ಯಾಟ್ನಿಂದ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 68 ಎಸೆತಗಳಲ್ಲಿ 114 ರನ್ಗಳ ಭರ್ಜರಿ ಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
168 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಕೇರಳ ಪರ ರೋಹನ್ (58) ಉತ್ತಮ ಆರಂಭ ಒದಗಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ನಾಯಕ ಸಂಜು ಸ್ಯಾಮ್ಸನ್ ಕೇವಲ 3 ರನ್ಗಳಿಗೆ ಔಟಾಗಿದ್ದರು. ಅಂತಿಮವಾಗಿ ಕೇರಳ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ಗಳಿಸಲಷ್ಟೇ ಶಕ್ತರಾದರು. ಅದರಂತೆ ಮಹರಾಷ್ಟ್ರ ತಂಡವು 40 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಬಾರಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 2 ಭರ್ಜರಿ ಶತಕ ಸಿಡಿಸಿರುವ ರುತುರಾಜ್ ಗಾಯಕ್ವಾಡ್ 4 ಪಂದ್ಯಗಳಿಂದ ಒಟ್ಟು 276 ರನ್ ಕಲೆಹಾಕಿದ್ದಾರೆ.
ಕೇರಳ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ) , ಸಚಿನ್ ಬೇಬಿ , ವಿಷ್ಣು ವಿನೋದ್ , ರೋಹನ್ ಕುನ್ನುಮ್ಮಲ್ , ಮೊಹಮ್ಮದ್ ಅಜರುದ್ದೀನ್ , ಶೋನ್ ರೋಜರ್ , ಅಬ್ದುಲ್ ಬಸಿತ್ , ಸುಧೇಶನ್ ಮಿಧುನ್ , ಉನ್ನಿಕೃಷ್ಣನ್ ಮನುಕೃಷ್ಣನ್ , ಕೆಎಂ ಆಸಿಫ್ , ವೈಶಾಕ್ ಚಂದ್ರನ್
ಮಹಾರಾಷ್ಟ್ರ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ) , ರಾಹುಲ್ ತ್ರಿಪಾಠಿ , ಅಝೀಂ ಕಾಜಿ , ಪವನ್ ಶಾ , ದಿವ್ಯಾಂಗ್ ಹಿಂಗಾನೇಕರ್ , ರಾಜವರ್ಧನ್ ಹಂಗರ್ಗೇಕರ್ , ಮನೋಜ್ ಇಂಗಳೆ , ಸತ್ಯಜೀತ್ ಬಚಾವ್ , ಶಂಶುಜಾಮ ಕಾಜಿ , ವಿಕ್ಕಿ ಓಸ್ತ್ವಾಲ್ , ಯಶ್ ಕ್ಷೀರಸಾಗರ್
Published On - 8:31 pm, Wed, 19 October 22