IPL 2022: ನೀವು ಸಾಕು ಪ್ರಾಣಿಯನ್ನು ಇಷ್ಟಪಡ್ತೀರಾ? ವಿರಾಟ್ ಕೊಹ್ಲಿ ಕಾಲೆಳೆದ ಮಿಸ್ಟರ್ ನಾಗ್ಸ್..!
Virat Kohli: ಪ್ರಸಕ್ತ ಐಪಿಎಲ್ ಸೀಸನ್ನ 12 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಅಲ್ಲದೆ 20ರ ಸರಾಸರಿಯಲ್ಲಿ ಒಟ್ಟು 216 ರನ್ ಗಳಿಸಿದ್ದಾರೆ.
IPL 2022: ಐಪಿಎಲ್ ಸೀಸನ್ 15 ನಲ್ಲಿ ವಿರಾಟ್ ಕೊಹ್ಲಿ (Virat Kohli) ಅತ್ಯಂತ ಕಳಪೆ ಫಾರ್ಮ್ನಲ್ಲಿರುವುದು ಗೊತ್ತೇ ಇದೆ. ಇದೇ ಕೆಟ್ಟ ಫಾರ್ಮ್ ಅನ್ನು ಹಾಸ್ಯಾತ್ಮಕವಾಗಿ ಬಳಸಿಕೊಂಡು ಇದೀಗ ಮಿಸ್ಟರ್ ನಾಗ್ಸ್ ಕೊಹ್ಲಿಯ ಕಾಲೆಳೆದಿದ್ದಾರೆ. ಆರ್ಸಿಬಿ ತಂಡದ ಇನ್ಸೈಡರ್ ಶೋನಲ್ಲಿ ವಿರಾಟ್ ಕೊಹ್ಲಿಯನ್ನು ಮಿಸ್ಟರ್ ನಾಗ್ಸ್ ಖ್ಯಾತಿ ದಾನಿಶ್ ಸೇಠ್ ಸಂದರ್ಶನ ಮಾಡಿದ್ದರು. ಈ ವೇಳೆ ಮಿಸ್ಟರ್ ನಾಗ್ಸ್ ನಿಮಗೆ ಸಾಕು ಪ್ರಾಣಿಗಳೆಂದರೆ ಇಷ್ಟನಾ ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಖುಷಿಯಿಂದಲೇ ಉತ್ತರಿಸಿದ ಕೊಹ್ಲಿ ನನಗೆ ಸಾಕುಪ್ರಾಣಿಗಳೆಂದರೆ ತುಂಬಾ ಇಷ್ಟ. ಆದರೆ ಪ್ರಾಣಿಗಳನ್ನು ಸಾಕುವಷ್ಟು ಸಮಯವಿಲ್ಲದ ಕಾರಣ, ಯಾವುದೇ ಸಾಕುಪ್ರಾಣಿ ನಮ್ಮ ಮನೆಯಲ್ಲಿಲ್ಲ ಎಂದು ಕೊಹ್ಲಿ ತಿಳಿಸಿದ್ದರು.
ಈ ಉತ್ತರದ ಬೆನ್ನಲ್ಲೇ ಇತ್ತೀಚೆಗೆ ನಿಮಗೆ ಎರಡು ಬಾತುಕೋಳಿ (ಡಕ್) ಸಿಕ್ಕಿರುವುದು ಎಲ್ಲರೂ ನೋಡಿದ್ರು ಎಂದು ಕಿಚಾಯಿಸಿದ್ರು. ಇದನ್ನು ಕೇಳಿ ಅತ್ತ ವಿರಾಟ್ ಕೊಹ್ಲಿ ಕೂಡ ನಗಲಾರಂಭಿಸಿದರು. ಅಲ್ಲದೆ ಅದು ಕೂಡ ಮೊದಲ ಎಸೆತದಲ್ಲೇ ಡಕ್ ಔಟ್ ಆಗಿರುವುದು. ನನ್ನ ವೃತ್ತಿಜೀವನದಲ್ಲಿ ಇದುವರೆಗೆ ಹೀಗೆ ಸಂಭವಿಸಿಲ್ಲ. ಇದೀಗ ನನ್ನ ಕೆರಿಯರ್ನಲ್ಲಿ ಎಲ್ಲವನ್ನೂ ನಾನು ನೋಡಿದ್ದೇನೆ. ಹಾಗಾಗಿ ನಾನು ಮುಗುಳ್ನಕ್ಕಿದ್ದೆ ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ಇದೇ ವೇಳೆ ಎಬಿ ಡಿವಿಲಿಯರ್ಸ್ ಜೊತೆಗಿನ ಬಾಂಧವ್ಯ ಬಗ್ಗೆ ಕೂಡ ಕೊಹ್ಲಿ ಮಾತನಾಡಿದ್ದಾರೆ. “ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಅವರೊಂದಿಗೆ ನಿಯಮಿತವಾಗಿ ಮಾತನಾಡುತ್ತೇನೆ. ಅವರು ಇತ್ತೀಚೆಗೆ ಯುಎಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಗಾಲ್ಫ್ ವೀಕ್ಷಿಸುತ್ತಿದ್ದರು . ಇದೇ ವೇಳೆ ಅವರು ಆರ್‌ಸಿಬಿಯ ಆಟವನ್ನೂ ಕೂಡ ನೋಡುತ್ತಿದ್ದರು. ಎಬಿಡಿ ಮುಂದಿನ ವರ್ಷ ಆರ್ಸಿಬಿ ಬರುತ್ತಾರೆ ಎಂದು ಭಾವಿಸುವೆ” ಎಂದು ಕೊಹ್ಲಿ ಹೇಳಿದರು.
ಪ್ರಸಕ್ತ ಐಪಿಎಲ್ ಸೀಸನ್ನ 12 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಅಲ್ಲದೆ 20ರ ಸರಾಸರಿಯಲ್ಲಿ ಒಟ್ಟು 216 ರನ್ ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತ್ಯಂತ ಕಳಪೆ ಪ್ರದರ್ಶನ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಕೆಟ್ಟ ಫಾರ್ಮ್ನಲ್ಲಿರುವ ಕೊಹ್ಲಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.