
ಭಾರತೀಯ ಕ್ರಿಕೆಟ್ ಲೋಕದಲ್ಲಿ ಈಗ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರದ್ದೇ ಅಬ್ಬರ. ದೋಹಾದಲ್ಲಿ ನಡೆದ ‘ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯಲ್ಲಿ ಯುಎಇ ತಂಡದ ವಿರುದ್ಧ ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ವೈಭವ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಅಮೋಘ ಪ್ರದರ್ಶನದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಯುವ ಆಟಗಾರನನ್ನು ಹಾಡಿ ಹೊಗಳಿದ್ದು, ಅಭಿಮಾನಿಗಳು ಮತ್ತು ವಿಮರ್ಶಕರಿಗೆ ಮಹತ್ವದ ಕಿವಿಮಾತೊಂದನ್ನು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ದಿಗ್ಗಜ ಎಡಗೈ ಬ್ಯಾಟರ್‌ಗಳಾದ ಯುವರಾಜ್ ಸಿಂಗ್ ಅಥವಾ ಸ್ವತಃ ಗಂಗೂಲಿ ಅವರಿಗೆ ಹೋಲಿಸುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗಂಗೂಲಿ ಸ್ಪಷ್ಟ ಉತ್ತರ ನೀಡಿದ್ದಾರೆ.
“ದಯವಿಟ್ಟು ಯಾರೊಂದಿಗೂ ಹೋಲಿಕೆ ಮಾಡಬೇಡಿ, ಅವನನ್ನು ಮುಕ್ತವಾಗಿ ಆಡಲು ಬಿಡಿ. ಅವನಿನ್ನೂ 15-16 ವರ್ಷದ ಎಡಗೈ ಆಟಗಾರ. ಅವನ ಮೇಲೆ ಅನಗತ್ಯ ನಿರೀಕ್ಷೆಗಳ ಭಾರ ಹೊರಿಸದೆ, ತನ್ನದೇ ಶೈಲಿಯಲ್ಲಿ ಬೆಳೆಯಲು ಅವಕಾಶ ನೀಡಬೇಕು,” ಎಂದು ಗಂಗೂಲಿ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಲ್ಲದೆ, “ಈ ಚಿಕ್ಕ ವಯಸ್ಸಿನಲ್ಲೇ ಐಪಿಎಲ್‌ನಲ್ಲೂ ಅದ್ಭುತವಾಗಿ ಆಡಿದ್ದಾನೆ. ಸಿಕ್ಕ ಅವಕಾಶಗಳಲ್ಲೆಲ್ಲಾ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾನೆ. ಆತ ಖಂಡಿತವಾಗಿಯೂ ಭಾರತೀಯ ಕ್ರಿಕೆಟ್‌ನ ಭವಿಷ್ಯ,” ಎಂದು ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ನವೆಂಬರ್ 24, 2026ರಂದು ದೋಹಾದಲ್ಲಿ ನಡೆದ ಗ್ರೂಪ್ ‘ಬಿ’ ಪಂದ್ಯದಲ್ಲಿ ಯುಎಇ ನೀಡಿದ್ದ 250 ರನ್‌ಗಳ ಬೃಹತ್ ಗುರಿಯನ್ನು ಭಾರತ ‘ಎ’ ತಂಡ ಕೇವಲ 14.2 ಓವರ್‌ಗಳಲ್ಲಿ (254/3) ಬೆನ್ನಟ್ಟಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಈ ಪಂದ್ಯದಲ್ಲಿ ಸೂರ್ಯವಂಶಿ ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ:
ಈ ಐತಿಹಾಸಿಕ ಇನ್ನಿಂಗ್ಸ್‌ಗೂ ಮುನ್ನ ಸೂರ್ಯವಂಶಿ ತಮ್ಮ ಆರಾಧ್ಯ ದೈವ ಯುವರಾಜ್ ಸಿಂಗ್ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದರು. ಹಿಂದಿನ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದ ಸೂರ್ಯವಂಶಿಗೆ, “ಕ್ರೀಸ್‌ನಲ್ಲಿ ನೆಲೆಯೂರಲು ಮೊದಲ 20 ಎಸೆತಗಳನ್ನು ತೆಗೆದುಕೊ” ಎಂದು ಯುವರಾಜ್ ಸಲಹೆ ನೀಡಿದ್ದರು. ಆದರೆ, ಪಂದ್ಯದಲ್ಲಿ ಮೊದಲ ಎರಡು ಎಸೆತಗಳನ್ನು ಎದುರಿಸಿದ ಬಳಿಕ ಪಿಚ್ ಬ್ಯಾಟಿಂಗ್‌ಗೆ ಸಂಪೂರ್ಣ ಸಹಕಾರಿಯಾಗಿದೆ ಎಂಬುದನ್ನು ಅರಿತ ಸೂರ್ಯವಂಶಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ಯುಎಇ ವಿರುದ್ಧದ ದಾಖಲೆಯ ದ್ವಿಶತಕದ ಬೆನ್ನಲ್ಲೇ, ಗುರುವಾರ (ನವೆಂಬರ್ 26) ದೋಹಾದಲ್ಲಿ ನಡೆದ ಶ್ರೀಲಂಕಾ ‘ಎ’ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲೂ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ‘ಎ’ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ಅವರು, ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 40 ರನ್ ಚಚ್ಚಿದರು.
ಇದನ್ನೂ ಓದಿ: 10,624 ರನ್, 20 ಶತಕ: 32ನೇ ವಯಸ್ಸಿಗೆ ‘ಬಾಬಾ’ ವಿದಾಯ!
ಎಂಟನೇ ಓವರ್‌ನಲ್ಲಿ ಜನಿತ್ ಲಿಯಾನಗೆ ಅವರ ಶಾರ್ಟ್ ಎಸೆತವನ್ನು ಪುಲ್ ಮಾಡುವ ಭರದಲ್ಲಿ ಮಿಡ್-ಆನ್‌ನಲ್ಲಿದ್ದ ಲಸಿತ್ ಕ್ರೂಸ್‌ಪುಲ್ಲೆ ಅವರಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ, ಆರಂಭಿಕ 8 ಓವರ್‌ಗಳಲ್ಲೇ ತಂಡದ ಮೊತ್ತವನ್ನು 80ರ ಗಡಿ ದಾಟಿಸುವ ಮೂಲಕ ಭಾರತ ‘ಎ’ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.