
ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಫೀಲ್ಡಿಂಗ್ ಕೋಚ್ ಕಣಕ್ಕಿಳಿದ ಘಟನೆ ನಡೆದಿದೆ. ನ್ಯೂಝಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಆಟಗಾರರ ಕೊರತೆಯ ಕಾರಣ ಫೀಲ್ಡಿಂಗ್ ಕೋಚ್ ವಂಡಿಲೆ ಗ್ವಾವು ಮೈದಾನಕ್ಕಿಳಿದಿದ್ದಾರೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮ್ಯಾಥ್ಯೂ ಬ್ರೀಟ್ಝ್ಕೆ (150) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್ಗಳಲ್ಲಿ 304 ರನ್ ಕಲೆಹಾಕಿತು.
ಆ ಬಳಿಕ ಸೌತ್ ಆಫ್ರಿಕಾ ತಂಡವು 11 ಆಟಗಾರರೊಂದಿಗೆ ಮೈದಾನಕ್ಕಿಳಿದಿದ್ದರು. ಆದರೆ 37ನೇ ಓವರ್ ವೇಳೆ ಆಟಗಾರನೊಬ್ಬ ಗಾಯಗೊಂಡು ಮೈದಾನ ತೊರೆದಿದ್ದಾರೆ. ಅತ್ತ ಬದಲಿ ಆಟಗಾರನನ್ನು ಫೀಲ್ಡಿಂಗ್ಗೆ ಇಳಿಸಲು ಸೌತ್ ಆಫ್ರಿಕಾ ಬಳಿ ಆಯ್ಕೆ ಇರಲಿಲ್ಲ. ಹೀಗಾಗಿ ಫೀಲ್ಡಿಂಗ್ ಕೋಚ್ ವಂಡಿಲೆ ಗ್ವಾವು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಸೌತ್ ಆಫ್ರಿಕಾ ಟಿ20 ಲೀಗ್ ನಡೆಯುತ್ತಿದ್ದ ಕಾರಣ, ಹರಿಣರ ಪಡೆ 12 ಆಟಗಾರರೊಂದಿಗೆ ಪಾಕಿಸ್ತಾನಕ್ಕೆ ಸರಣಿ ಆಡಲು ಆಗಮಿಸಿದೆ. ಇತ್ತ ಬಂದ 12 ಆಟಗಾರರಲ್ಲಿ ಇಬ್ಬರು ಗಾಯಗೊಳ್ಳುತ್ತಿದ್ದಂತೆ ಸಮಸ್ಯೆ ಎದುರಾಗಿದೆ. ಹೀಗಾಗಿ ಫೀಲ್ಡಿಂಗ್ ಕೋಚ್ ಮೈದಾನಕ್ಕಿಳಿದಿದ್ದಾರೆ.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!
ಸೌತ್ ಆಫ್ರಿಕಾ ಪರ ಕೋಚ್ ಫೀಲ್ಡಿಂಗ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐರ್ಲೆಂಡ್ ವಿರುದ್ಧದ ಸರಣಿ ವೇಳೆ ಆಟಗಾರರ ಕೊರತೆಯಿಂದಾಗಿ ಬ್ಯಾಟಿಂಗ್ ಕೋಚ್ ಜೆಪಿ ಡುಮಿನಿ ಮೈದಾನಕ್ಕಿಳಿದಿದ್ದರು. ಇದೀಗ ಫೀಲ್ಡಿಂಗ್ ಕೋಚ್ ವಂಡಿಲೆ ಗ್ವಾವು ಕೂಡ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ.