ಎರಡು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವು ಗಾಲೆಯಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ (Australia and Sri Lanka) ನಡುವೆ ನಡೆಯಿತು. ಈ ಪಂದ್ಯವನ್ನು ಆಸ್ಟ್ರೇಲಿಯಾ 3 ದಿನಗಳಲ್ಲಿ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಕುಸಿದಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 321 ರನ್ ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. ನಂತರ ಆಸ್ಟ್ರೇಲಿಯಾದ ಬೌಲರ್‌ಗಳು ಆತಿಥೇಯರ ಎರಡನೇ ಇನ್ನಿಂಗ್ಸ್ ಅನ್ನು 113 ರನ್‌ಗಳಿಗೆ ನಿಲ್ಲಿಸಿದರು. ಹೀಗಾಗಿ ಆಸ್ಟ್ರೇಲಿಯಾ 5 ರನ್‌ಗಳ ಗುರಿಯನ್ನು ಪಡೆಯಿತು. ಇದರೊಂದಿಗೆ ಪ್ಯಾಟ್ ಕಮಿನ್ಸ್ (Pat Cummins) ನಾಯಕತ್ವದಲ್ಲಿ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದುಕೊಂಡಿತು.
18 ಎಸೆತಗಳಲ್ಲಿ 26 ರನ್
ಈ ಪಂದ್ಯದಲ್ಲಿ ಜಾಸ್ತಿ ಸುದ್ದಿಯಾಗಿದ್ದು, ಆಸ್ಟ್ರೇಲಿಯಾದ ಗೆಲುವಲ್ಲ, ಬದಲಿಗೆ ಅದರ ನಾಯಕ ಕಮ್ಮಿನ್ಸ್ ಹೊಡೆದ ಸಿಕ್ಸರ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಆಸ್ಟ್ರೇಲಿಯದ ನಾಯಕ 18 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ವೇಳೆ ಅವರು 3 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಅದರಲ್ಲಿ ಕಮ್ಮಿನ್ಸ್ ಬಾರಿಸಿದ ಆ ಒಂದು ಸಿಕ್ಸರ್ ಎಷ್ಟು ಬಲವಾಗಿ ಹೊಡೆದರೆಂದರೆ ಚೆಂಡು ಕ್ರೀಡಾಂಗಣವನ್ನು ದಾಟಿ ನೇರವಾಗಿ ರಸ್ತೆಯ ಮೇಲೆ ಬಿದ್ದಿತು.
ರಸ್ತೆಯಲ್ಲಿ ಬಿದ್ದ ಚೆಂಡು
ಸ್ಪಿನ್ನರ್ ಜೆಫ್ರಿ ವೆಂಡಸಿ ಅವರ ಓವರ್‌ನ ಕೊನೆಯ ಎಸೆತದಲ್ಲಿ, ಕಮ್ಮಿನ್ಸ್ ಮೊಣಕಾಲಿನ ಮೇಲೆ ಕುಳಿತು ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು. ಚೆಂಡು ನೇರವಾಗಿ ರಸ್ತೆಯ ಮೇಲೆ ಬಿದ್ದಿತು. ಅಭಿಮಾನಿಗಳು ಕಮ್ಮಿನ್ಸ್ ಅವರ ಈ ಶಾಟ್ ಅನ್ನು ಕಂಡು ದಂಗಾಗಿ ಹೋಗಿದ್ದಾರೆ. ಅದೇ ಸಮಯದಲ್ಲಿ, ಕೆಲವು ಬಳಕೆದಾರರು ಕಮ್ಮಿನ್ಸ್ ಅವರ ಐಪಿಎಲ್ ಇನ್ನಿಂಗ್ಸ್ ಅನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
Who’s going to find the ball Pat Cummins just hit out of Galle? ? #SLvAUS pic.twitter.com/BBSuoiJFm3
— Chloe-Amanda Bailey (@ChloeAmandaB) June 30, 2022
ಮೊದಲ ಟೆಸ್ಟ್ ಪಂದ್ಯವನ್ನು ಮೂರನೇ ದಿನವೇ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಶ್ರೀಲಂಕಾ ಪರ ನಿರೋಶನ್ ಡಿಕ್ವೆಲ್ಲಾ ಮೊದಲ ಇನ್ನಿಂಗ್ಸ್‌ನಲ್ಲಿ 58 ರನ್ ಗಳಿಸಿದ್ದರು, ಆದರೆ ಶ್ರೀಲಂಕಾದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ನಾಯಕ ದಿಮುತ್ ಕರುಣರತ್ನೆ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ ಗರಿಷ್ಠ 23 ರನ್ ಗಳಿಸಿದರು. ಅದೇ ವೇಳೆ ಡಿಕ್ವೆಲ್ಲಾ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ 9 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮಿಚೆಲ್ ಸ್ವೀಪ್ಸನ್ 5 ವಿಕೆಟ್ ಪಡೆದರು. ಟ್ರಾವಿಸ್ ಹೆಡ್ ಶ್ರೀಲಂಕಾದ ಎರಡನೇ ಇನ್ನಿಂಗ್ಸ್‌ನಲ್ಲಿ 10 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆತಿಥೇಯರ ಬ್ಯಾಟಿಂಗ್ ಬೆನ್ನೇಲುಬ್ಬನ್ನು ಮುರಿದರು.