
ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ತಂಡವು ಇದೀಗ 2026 ರಲ್ಲೂ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತವಾಗಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಈ ಅಮೋಘ ಸಾಧನೆಯನ್ನು ಇಂಗ್ಲೆಂಡ್ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ವಿಶ್ಲೇಷಿಸಿದ್ದು, ಈ ವೇಳೆ ನೀಡಿದ ಹೇಳಿಕೆಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಭಾರತ ತಂಡ ಮತ್ತು ಪ್ರಪಂಚದ ಉಳಿದ ಭಾಗಗಳ ತಂಡಗಳ ನಡುವಿನ ಅಂತರವು ದೊಡ್ಡದಾಗುತ್ತಲೇ ಇದೆ. ಈ ಮೂಲಕ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನಲ್ಲಿ ಛಾಪು ಹೊತ್ತಿದ್ದಾರೆ. ಈ ಅಂತರ ಬೆಳೆಯುತ್ತಾ ಹೋಗುತ್ತಿರಲು ಸ್ಟುವರ್ಟ್ ಬ್ರಾಡ್ ಕೆಲ ಕಾರಣಗಳನ್ನು ಮುಂದಿಟ್ಟಿದ್ದಾರೆ.
ಇನ್ನು ಟೀಮ್ ಇಂಡಿಯಾ ಬಲಿಷ್ಠವಾಗಲು ಐಪಿಎಲ್ ಪ್ರಮುಖ ಕಾರಣ ಎಂದಿರುವ ಸ್ಟುವರ್ಟ್ ಬ್ರಾಡ್, ಒಂದೆರಡು ಪಂದ್ಯಗಳಲ್ಲಿ ಸರಿಯಾಗಿ ಆಡದಿದ್ದರೆ ನಿಮ್ಮ ಮೇಲೆ ಪ್ರಶ್ನೆಗಳು ಏಳುತ್ತವೆ. ಹೀಗಾಗಿ ನೀವು ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಮೊದಲೇ ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಒಗ್ಗಿಕೊಂಡಿರುತ್ತೀರಿ. ಇದಕ್ಕೆಲ್ಲಾ ಮುಖ್ಯ ಕಾರಣ ಐಪಿಎಲ್ ಎಂದು ಭಾವಿಸುತ್ತೇನೆ.
ಬೃಹತ್ ಪ್ರೇಕ್ಷಕರ ಮುಂದೆ ಮತ್ತು ಹೆಚ್ಚಿನ ನಿರೀಕ್ಷೆಗಳ ನಡುವೆ ಆಡುವ ಈ ಅನುಭವವು ಭಾರತೀಯ ಆಟಗಾರರಿಗೆ ದೊಡ್ಡ ಬಲವಾಗಿದೆ. ಈ ಎಲ್ಲಾ ಅನುಭವಗಳೊಂದಿಗೆ ಯುವ ಆಟಗಾರರು ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡುತ್ತಿದ್ದಾರೆ. ಇದುವೇ ಇತರೆ ತಂಡಗಳಿಂದ ಟೀಮ್ ಇಂಡಿಯಾವನ್ನು ಭಿನ್ನವಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನೇ ನೋಡಿ, ಆ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಮತ್ತು ರಿಷಭ್ ಪಂತ್ ಅವರಂತಹ ಶ್ರೇಷ್ಠ ಆಟಗಾರರು ಇಲ್ಲ. ಇದು ಟೀಮ್ ಇಂಡಿಯಾದ ಸ್ಟ್ರೆಂತ್ ಅನ್ನು ಎತ್ತಿ ತೋರಿಸುತ್ತದೆ.
ಯಶಸ್ವಿ ಜೈಸ್ವಾಲ್ ಟೆಸ್ಟ್ ಮತ್ತು ಟಿ20 ಎರಡರಲ್ಲೂ ಅದ್ಭುತ ದಾಖಲೆ ಹೊಂದಿದ್ದರೂ ಸಹ ಅವರಿಗೆ ಭಾರತದ ಈ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎನ್ನುವುದು ಭಾರತದ ಪ್ರತಿಭೆಯ ಅಗಾಧತೆಗೆ ಸಾಕ್ಷಿ ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅನುಭವಿ ಆಟಗಾರನಾಗಿ ಭಾರತ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ “ಅತ್ಯಂತ ಅಪಾಯಕಾರಿ ಆಟಗಾರ” ಎಂದು ಬಣ್ಣಿಸಿದ್ದಾರೆ. ಪಾಂಡ್ಯ ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಅತಿ ಸುಲಭವಾಗಿ ಸಿಕ್ಸರ್ ಹೊಡೆಯುವ ಸಾಮರ್ಥ್ಯವು ಯಾವುದೇ ತಂಡಕ್ಕೆ ಕಂಟಕವಾಗಬಲ್ಲದು ಎಂದು ಹೇಳಿದ್ದಾರೆ.
ಹಾಗೆಯೇ ಮೊದಲೇ ಹೇಳಿದಂತೆ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪಾಲಿನ ಗೇಮ್ ಚೇಂಜರ್. ಅವರಂತಹ ಬೌಲರ್ ತಂಡದಲ್ಲಿರುವುದು ಟೀಮ್ ಇಂಡಿಯಾದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಹೊಸ ಗರ್ಲ್ ಫ್ರೆಂಡ್ ಎಂಟ್ರಿ… ಜೀವಕ್ಕೆ ಜೀವದಂತಿದ್ದ ಅಣ್ಣನೇ ದೂರ..!
ಈ ಕಾರಣಗಳಿಂದಾಗಿ ಭಾರತ ಮತ್ತು ಪ್ರಪಂಚದ ಇತರ ದೇಶಗಳ ನಡುವಿನ ಅಂತರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವುದು ಇತರ ತಂಡಗಳಿಗೆ ಕಷ್ಟವಾಗಬಹುದು ಎಂಬುದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.