IND vs BAN: ದ್ವಿಶತಕದ ಬಳಿಕ ಶತಕ; ಗವಾಸ್ಕರ್ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ ಶುಭ್ಮನ್ ಗಿಲ್
Subman Gill's Century: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ಎರಡನೇ ಇನ್ನಿಂಗ್ಸ್‌ನಲ್ಲೂ ಅದ್ಭುತ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲೂ ಅಜೇಯ ಶತಕದೊಂದಿಗೆ ಭಾರತವನ್ನು 500 ರನ್‌ಗಳ ಸಮೀಪಕ್ಕೆ ತಂದಿದ್ದಾರೆ. ಈ ಪ್ರವಾಸದಲ್ಲಿ ಇದುವರೆಗೆ ಅವರು ಒಂದು ದ್ವಿಶತಕ ಮತ್ತು ಎರಡು ಶತಕಗಳನ್ನು ಬಾರಿಸಿದ್ದಾರೆ.

ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲೂ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill) ಶತಕ ಬಾರಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್‌ಗಳ ಇನ್ನಿಂಗ್ಸ್ ಆಡಿದ್ದ ಶುಭ್ಮನ್ ಗಿಲ್ ಇದೀಗ ಎರಡನೇ ಇನ್ನಿಂಗ್ಸ್‌ನಲ್ಲೂ ಅಜೇಯ ಶತಕ ಸಿಡಿಸಿದ್ದಾರೆ. ಈ ಮೂಲಕ ಗಿಲ್, ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಅವರ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಶುಭ್ಮನ್ ಗಿಲ್ ಅವರ ಈ ಶತಕದ ನೆರವಿನಿಂದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 500 ರನ್‌ಗಳ ಸಮೀಪಕ್ಕೆ ಬಂದಿದೆ. ಈ ಪ್ರವಾಸದಲ್ಲಿ ಇದುವರೆಗೆ ಶುಭ್ಮನ್ ಗಿಲ್ ಬ್ಯಾಟ್ನಿಂದ 1 ದ್ವಿಶತಕ ಹಾಗೂ 2 ಶತಕಗಳು ಸಿಡಿದಿವೆ.
ಗವಾಸ್ಕರ್ ದಾಖಲೆ ಸರಿಗಟ್ಟಿದ ಗಿಲ್
ವಾಸ್ತವವಾಗಿ ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿರುವ ಗಿಲ್, ಈ ಮೂಲಕ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಹಾಗೂ ದ್ವಿಶತಕ ಬಾರಿಸಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 124 ರನ್‌ಗಳ ಇನ್ನಿಂಗ್ಸ್ ಆಡಿದ್ದ ಗವಾಸ್ಕರ್, ಎರಡನೇ ಇನ್ನಿಂಗ್ಸ್‌ನಲ್ಲಿ 220 ರನ್ ಬಾರಿಸಿದ್ದರು. ಇದೀಗ ಗಿಲ್, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ, ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಗವಾಸ್ಕರ್ ಅವರ ದಾಖಲೆಯನ್ನು ಪುನಾರವರ್ತಿಸಿದ್ದಾರೆ. ಇದರೊಂದಿಗೆ ಗಿಲ್, ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್ ಮನ್ ಮತ್ತು ವಿಶ್ವದ 9 ನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉಭಯ ದೇಶಗಳ ನಡುವೆ ನಡೆದ ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವುದರೊಂದಿಗೆ ಈ ಪ್ರವಾಸವನ್ನು ಆರಂಭಿಸಿದ ಶುಭಮನ್ ಗಿಲ್, ಇದೀಗ ಎಡ್ಜ್‌ಬಾಸ್ಟನ್‌ನಲ್ಲಿಯೂ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್ 269 ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ಭಾರತೀಯ ನಾಯಕನೆಂಬ ಇತಿಹಾಸ ಸೃಷ್ಟಿಸಿದ್ದರು. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ ಶತಕ ಬಾರಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ.
ವೃತ್ತಿಜೀವನದ 8 ನೇ ಶತಕ
ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಮುಂದುವರೆಸಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ದಿನದಾಟ ಶುರುವಾದ ಸ್ವಲ್ಪ ಸಮಯದಲ್ಲೆ ಕರುಣ್ ನಾಯರ್ ರೂಪದಲ್ಲಿ ಎರಡನೇ ವಿಕೆಟ್ ಪತನವಾಯಿತು. ಆ ಬಳಿಕ ಮೈದಾನಕ್ಕಿಳಿದ ನಾಯಕ ಗಿಲ್ ಮೊದಲ ಇನ್ನಿಂಗ್ಸ್‌ನಂತೆಯೇ ಎರಡನೇ ಇನ್ನಿಂಗ್ಸ್‌ನಲ್ಲೂ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ರಿಷಭ್ ಪಂತ್ ಜೊತೆ ಮತ್ತೊಂದು ಶತಕದ ಜೊತೆಯಾಟ ನಡೆಸಿದ ಗಿಲ್, ಇದರೊಂದಿಗೆ ಎರಡನೇ ಸೆಷನ್‌ನಲ್ಲಿ ಸ್ಮರಣೀಯ ಶತಕವನ್ನು ಪೂರೈಸಿದರು. ಇದು ಗಿಲ್ ಅವರ ವೃತ್ತಿಜೀವನದ 8 ನೇ ಶತಕವಾಗಿದ್ದು, ಈ ಸರಣಿಯ ಮೂರನೇ ಮತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಶತಕವಾಗಿದೆ.
IND vs ENG: ಕ್ಯಾಚ್ ಬಿಟ್ಟ ಶುಭ್ಮನ್ ಗಿಲ್ ಹಣೆಗೆ ಬಡಿದ ಚೆಂಡು; ತಪ್ಪಿದ ಅನಾಹುತ
54 ವರ್ಷಗಳ ಹಿಂದಿನ ಇತಿಹಾಸ ಪುನರಾವರ್ತನೆ
ಈ ಶತಕದೊಂದಿಗೆ ಗಿಲ್ ಸುಮಾರು 150 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿದ ವಿಶ್ವದ 9 ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನೊಂದು ವಿಶೇಷ ಸಂಗತಿಯೆಂದರೆ ಈ ಸಾಧನೆ ಮಾಡಿದ 9 ಆಟಗಾರರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ. ಗಿಲ್ಗೂ ಮೊದಲು ಈ ಸಾಧನೆ ಮಾಡಿದ್ದ ಸುನಿಲ್ ಗವಾಸ್ಕರ್, ಆ ಸಮಯದಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Sat, 5 July 25