
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ರೋಚಕ ಕಾದಾಟಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಪಂದ್ಯಗಳು ಈ ಬಾರಿ ಹೆಚ್ಚಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (RR vs SRH) ನಡುವಣ ಪಂದ್ಯ. ಭಾನುವಾರ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಹೈದರಾಬಾದ್ 4 ವಿಕೆಟ್ಗಳ ಗೆಲುವು ಸಾಧಿಸಿತು. ಕೊನೆಯ ಎಸೆದ ವರೆಗೂ ನಡೆದ ಕಾದಾಟದಲ್ಲಿ ಎಸ್ಆರ್ಹೆಚ್ ಮೇಲುಗೈ ಸಾಧಿಸಿತು. ಹೀರೋ ಆಗಿದ್ದ ಸಂದೀಶ್ ಶರ್ಮಾ (Sundeep Sharma) ಒಂದು ನಿಮಿಷದ ಒಳಗೆ ಜೀರೋ ಆದರೆ, ಅಬ್ದುಲ್ ಸಮದ್ (Abdul Samad) ಸ್ಫೋಟಕ ಸಿಕ್ಸ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ಗೆ ಅನ್ಮೋಲ್ಪ್ರೀತ್ ಸಿಂಗ್ (33) ಮತ್ತು ಅಭಿಷೇಕ್ ಶರ್ಮಾ (55) ಸ್ಫೋಟಕ ಆರಂಭ ಒದಗಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ ಕೂಡ ಕೇವಲ 29 ಎಸೆತಗಳಲ್ಲಿ 2 ಫೋರ್, 3 ಸಿಕ್ಸರ್ ಸಿಡಿಸಿ 47 ರನ್ ಸಿಡಿಸಿದರು. ಹೆನ್ರಿಚ್ ಕ್ಲಾಸೆನ್ 12 ಎಸೆತಗಳಲ್ಲಿ 26 ರನ್ ಗಳಿಸಿದರೆ ನಾಯಕ ಆ್ಯಡಂ ಮಾರ್ಕ್ರಮ್ (6) ವೈಫಲ್ಯ ಅನುಭವಿಸಿದರು. ಈ ಸಂದರ್ಭ ತಂಡ ಸೋಲಿನ ಸುಳಿಗೆ ಸಿಲುಕಿತ್ತು.
IPL 2023: ವಿರಾಟ್ ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಖ್ಯಾತ ಕ್ರಿಕೆಟಿಗನ ಪುತ್ರರು
ಆದರೆ, ತಂಡದ ಗೆಲುವಿನ ಆಸೆ ಚಿಗುರಿಸಿದ್ದು ಗ್ಲೆನ್ ಪಿಲಿಪ್ಸ್. ಕೇವಲ 7 ಎಸೆತಗಳಲ್ಲಿ 1 ಫೋರ್, 3 ಸಿಕ್ಸರ್ ಬಾರಿಸಿ 25 ರನ್ ಗಳಿಸಿ ಪಂದ್ಯವನ್ನು ಎಸ್ಆರ್ಹೆಚ್ ಕಡೆ ತಿರುಗಿಸಿ ನಿರ್ಗಮಿಸಿದರು. ಆದರೆ, ಕೊನೆಯ ಓವರ್ನಲ್ಲಿ ಹೈದರಾಬಾದ್ಗೆ ಗೆಲ್ಲಲು 17 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿ ಅಬ್ದುಲ್ ಸಮದ್ ಮತ್ತು ಮಾರ್ಕೊ ಜಾನ್ಸೆನ್ ಇದ್ದರೆ ಸಂದೀಪ್ ಶರ್ಮಾ ಬೌಲರ್ ಆಗಿದ್ದರು. ಮೊದಲ ಎಸೆತದಲ್ಲಿ ಸಮದ್ 2 ರನ್ ಗಳಿಸಿದರೆ, ದ್ವಿತೀಯ ಎಸೆತದಲ್ಲಿ ಲಾಂಗ್ ಆನ್ ಮೂಲಕ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲಿ 2 ಹಾಗೂ ನಾಲ್ಕನೇ ಮತ್ತು ಐದನೇ ಎಸೆತದಲ್ಲಿ 1 ರನ್ ಬಂದವು. ಹೀಗಾಗಿ ಕೊನೆಯ ಎಸೆತದಲ್ಲಿ ಎಸ್ಆರ್ಹೆಚ್ಗೆ ಗೆಲ್ಲಲು 5 ರನ್ಗಳು ಬೇಕಾದವು.
6ನೇ ಎಸೆತದ ಸಂದೀಪ್ ಬೌಲಿಂಗ್ನಲ್ಲಿ ಸಿಕ್ಸ್ ಸಿಡಿಸಲು ಹೋಗಿ ಸಮದ್ ಔಟಾದರು. ಆರ್ಆರ್ ಆಟಗಾರರು ಗೆಲುವನ್ನು ಸಂಭ್ರಮಿಸುತ್ತಿದ್ದರು. ಆದರೆ, ಕ್ಷಣಾರ್ಧದಲ್ಲಿ ಪಂದ್ಯದ ಗತಿ ಬದಲಾಯಿತು. ಯಾಕೆಂದರೆ ಸಂದೀಪ್ ಹಾಕಿದ ಕೊನೆಯ ಎಸೆತ ನೋ ಬಾಲ್ ಆಗಿತ್ತು. ಚೆಂಡು ಎಸೆಯುವಾಗ ಸಂದೀಪ್ ಅವರ ಕಾಲು ಗೆರೆದಾಟಿ ಮುಂದೆಬಂದಿತ್ತು. ಹೀಗಾಗಿ ಸಮದ್ಗೆ ಆಡಲು ಮತ್ತೊಂದು ಎಸೆತ ಸಿಕ್ಕಿತು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಉಪಯೋಗಿಸಿಕೊಂಡ ಅಬ್ದುಲ್ ಫ್ರೀ ಹಿಟ್ನಲ್ಲಿ ಸಿಕ್ಸ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇಲ್ಲಿದೆ ನೋಡಿ ವಿಡಿಯೋ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (35) ಮತ್ತು ಜೋಸ್ ಬಟ್ಲರ್ ಬಿರುಸಿನ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್ ಹಾಗೂ ಬಟ್ಲರ್ ಹೈದರಾಬಾದ್ ಬೌಲರ್ಗಳ ಬೆಂಡೆತ್ತು ಅರ್ಧಶತಕ ಸಿಡಿಸಿದರು. ಜೋಸ್ 59 ಎಸೆತಗಳಲ್ಲಿ 10 ಫೋರ್, 4 ಸಿಕ್ಸರ್ನೊಂದಿಗೆ 95 ರನ್ ಚಚ್ಚಿದರೆ, ಸ್ಯಾಮ್ಸನ್ 38 ಎಸೆತಗಳಲ್ಲಿ 4 ಫೋರ್, 5 ಸಿಕ್ಸ್ನೊಂದಿಗೆ ಅಜೇಯ 66 ರನ್ ಕಲೆಹಾಕಿದರು. ಪರಿಣಾಮ ಆರ್ಆರ್ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ