Suresh Raina: ಸುರೇಶ್ ರೈನಾ ವೃತ್ತಿಜೀವನದ 3 ಕಪ್ಪುಚುಕ್ಕೆಗಳು
Suresh Raina: ಸುರೇಶ್ ರೈನಾ ಅವರ 16 ವರ್ಷಗಳ ವೃತ್ತಿಜೀವನದಲ್ಲಿ ಈ ಮೂರು ಘಟನೆಗಳು ಕಪ್ಪುಚುಕ್ಕೆಗಳಾಗಿ ಕಾಣಿಸಿಕೊಂಡಿದ್ದು ಮಾತ್ರ ವಿಪರ್ಯಾಸ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ (Suresh Raina) ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಇದರೊಂದಿಗೆ ದೇಶೀಯ ಅಂಗಳದಲ್ಲಿ ಹಾಗೂ ಐಪಿಎಲ್ನಲ್ಲಿ ರೈನಾ ಕೆರಿಯರ್ ಅಂತ್ಯಗೊಂಡಿದೆ. ಇದಾಗ್ಯೂ ರೈನಾ ಅವರ ಮುಂದಿನ ನಡೆಯೇನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ತಮ್ಮ ವೃತ್ತಿಜೀವನದಲ್ಲಿ ಹಲವು ಏರಿಳಿತವನ್ನು ಕಂಡಿದ್ದ ರೈನಾ ಕೆಲ ಬಾರಿ ವಿವಾದಕ್ಕೂ ಒಳಗಾಗಿದ್ದರು. ಈ ವಿವಾದಗಳೊಂದಿಗೆ ಅವರ ವೃತ್ತಿಜೀವನದ ಗ್ರಾಫ್ ಕೂಡ ಕುಸಿಯಲಾರಂಭಿಸಿತು. ಅದರ ಪರಿಣಾಮವೇ ಕಳೆದ ಬಾರಿಯ ಐಪಿಎಲ್ನಲ್ಲಿ ರೈನಾ ಹರಾಜಾಗದೇ ಉಳಿದಿರುವುದು. ಹಾಗಿದ್ರೆ ರೈನಾ ಅವರ ವೃತ್ತಿಜೀವನದಲ್ಲಿ ಕೇಳಿಬಂದ ವಿವಾದಗಳೇನು ನೋಡೋಣ…
- ಜಾತಿ ವಿವಾದ: ಸುರೇಶ್ ರೈನಾ ಅವರ ಹೆಸರು ಹಿಂದೊಮ್ಮೆ ಜಾತಿ ವಿವಾದದಲ್ಲಿ ಕೇಳಿ ಬಂದಿತ್ತು. ತಮಿಳುನಾಡು ಪ್ರೀಮಿಯರ್ ಲೀಗ್‌ನ ಕಾಮೆಂಟರಿಯಲ್ಲಿ ಕಾಣಿಸಿಕೊಂಡಿದ್ದ ರೈನಾ ಮಾತಿನ ಭರದಲ್ಲಿ ತಮ್ಮ ಜಾತಿಯನ್ನು ಉಲ್ಲೇಖಿಸಿದ್ದರು. 2004 ರಿಂದ ನಾನು ಚೆನ್ನೈನಲ್ಲಿ (ಸಿಎಸ್ಕೆ) ಆಡುತ್ತಿದ್ದೇನೆ. ನಾನೊಬ್ಬ ಬ್ರಾಹ್ಮಣನಾದ ಕಾರಣ ಇಲ್ಲಿನ ಸಂಸ್ಕೃತಿಯನ್ನು ಬೇಗನೇ ಅರಿಯಲು ಸಾಧ್ಯವಾಗಿದೆ ಎಂದು ರೈನಾ ಹೇಳಿದ್ದರು. ಈ ಹೇಳಿಕೆಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತಪಡಿಸಿದ್ದರು. ಅದರಲ್ಲೂ ತಮಿಳುನಾಡಿನಲ್ಲಿ ರೈನಾ ವಿರುದ್ದ ಆಕ್ರೋಶಗಳು ವ್ಯಕ್ತವಾಗಿತ್ತು.
- ಸಿಎಸ್ಕೆ ಜೊತೆಗಿನ ಜಗಳ: ಕೋವಿಡ್ ಕಾರಣದಿಂದಾಗಿ, ಐಪಿಎಲ್ 2020 ರ ಎರಡನೇ ಹಂತವನ್ನು ಯುಎಇಯಲ್ಲಿ ಆಡಲಾಯಿತು. ಆದರೆ ಆಗಸ್ಟ್ 29 ರಂದು, ವೈಯಕ್ತಿಕ ಕಾರಣಗಳಿಂದ ರೈನಾ ಯುಎಇನಿಂದ ಭಾರತಕ್ಕೆ ಮರಳಿದ್ದರು. ಇದಕ್ಕೆ ಕಾರಣ ಸಿಎಸ್ಕೆ ಫ್ರಾಂಚೈಸಿಯ ನಡುವಣ ರೈನಾ ಅವರ ಮುನಿಸು. ಹೋಟೆಲ್‌ನಲ್ಲಿ ಬಾಲ್ಕನಿ ಕೊಠಡಿ ಬೇಕು ಎಂದು ತಕರಾರು ತೆಗೆದು ರೈನಾ ಸಿಎಸ್ಕೆ ಮ್ಯಾನೇಜ್ಮೆಂಡ್ ಜೊತೆ ಜಗಳವಾಡಿದ್ದರು. ಅಲ್ಲದೆ ಅರ್ಧದಲ್ಲೇ ತಂಡವನ್ನು ತೊರೆದು ಭಾರತಕ್ಕೆ ಮರಳಿದ್ದರು. ಇದರಿಂದಾಗಿ ಎಂಎಸ್ ಧೋನಿ ಅವರೊಂದಿಗಿನ ಸಂಬಂಧವೂ ಕೂಡ ಹದಗೆಟ್ಟಿತು. ಇದಾಗ್ಯೂ ರೈನಾ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದರು.
- ಮೈದಾನದಲ್ಲೇ ಕಿತ್ತಾಟ: ರೈನಾ ಅವರ ವೃತ್ತಿಜೀವನದಲ್ಲಿ ಕೇಳಿ ಬಂದ ಮೊದಲ ವಿವಾದ ರವೀಂದ್ರ ಜಡೇಜಾ ಜೊತೆಗಿನ ಜಗಳ. ಟೀಮ್ ಇಂಡಿಯಾ ಪರ ಆಡುತ್ತಿದ್ದ ಇಬ್ಬರ ನಡುವೆ ವೈಮನಸ್ಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನು ಪುಷ್ಠೀಕರಿಸುವಂತೆ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದ ವೇಳೆ ಕ್ಯಾಚ್ ವಿಷಯದಲ್ಲಿ ರೈನಾ ಹಾಗೂ ಜಡೇಜಾ ಮೈದಾನದಲ್ಲಿ ಜಗಳವಾಡಿದ್ದರು.
ಸುರೇಶ್ ರೈನಾ ಅವರ 16 ವರ್ಷಗಳ ವೃತ್ತಿಜೀವನದಲ್ಲಿ ಈ ಮೂರು ಘಟನೆಗಳು ಕಪ್ಪುಚುಕ್ಕೆಗಳಾಗಿ ಕಾಣಿಸಿಕೊಂಡಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ