ಹಾರ್ದಿಕ್ ಪಾಂಡ್ಯ ಜತೆ ಯಾವುದೇ ಮುನಿಸಿಲ್ಲ: ಸೂರ್ಯಕುಮಾರ್ ಯಾದವ್
Suryakumar Yadav vs Hardik Pandya: ಭಾರತ ಟಿ20 ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಕೆಳಗಿಳಿಸಿ ಸೂರ್ಯಕುಮಾರ್ ಯಾದವ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಇದರ ಹೊರತಾಗಿಯೂ ಉಪನಾಯಕತ್ವದ ನಿರೀಕ್ಷೆಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಇಂಗ್ಲೆಂಡ್ ಸರಣಿಗೂ ಮುನ್ನ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಭಾರತ ಟಿ20 ತಂಡದ ನೂತನ ಉಪನಾಯಕನಾಗಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಸೂರ್ಯ-ಹಾರ್ದಿಕ್ ನಡುವೆ ಎಲ್ಲವೂ ಸರಿಯಿಲ್ಲವಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಮುನ್ನಡೆಸಲಿದ್ದಾರೆ. ಆದರೆ ಈ ಸರಣಿಯಲ್ಲಿ ಉಪನಾಯಕರಾಗಿ ಕಾಣಿಸಿಕೊಳ್ಳುತ್ತಿರುವುದು ಅಕ್ಷರ್ ಪಟೇಲ್. ಈ ಹಿಂದೆ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಬಿಂಬಿತರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಎಲ್ಲಾ ರೀತಿಯ ನಾಯಕತ್ವದಿಂದಲೂ ಕಡೆಗಣಿಸಲಾಗಿದೆ.
ಇತ್ತ ಅಕ್ಷರ್ ಪಟೇಲ್ ಉಪನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ, ಈ ಬದಲಾವಣೆಗೆ ಏನು ಕಾರಣ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ಟೀಮ್ ಇಂಡಿಯಾ ನಾಯಕ ತೆರೆ ಎಳೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಯಾದವ್ಗೆ ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದೇ ವೇಳೆ ಮಾತನಾಡಿದ ಸೂರ್ಯ, ಅದೆಲ್ಲವೂ ಊಹಾಪೋಹ ಅಷ್ಟೇ. ನಾವಿಬ್ಬರೂ ಉತ್ತಮ ಗೆಳೆಯರು ಎಂದು ತಿಳಿಸಿದ್ದಾರೆ.
ನನ್ನ ಹಾಗೂ ಅವರ (ಹಾರ್ದಿಕ್ ಪಾಂಡ್ಯ) ಸಂಬಂಧ ನಿಜವಾಗಿಯೂ ಉತ್ತಮವಾಗಿದೆ. ನಾವು ಬಹಳ ಸಮಯದಿಂದ ಒಟ್ಟಿಗೆ ಆಡುತ್ತಿದ್ದೇವೆ. 2018 ರಿಂದ ನಾನು ಮುಂಬೈ ಇಂಡಿಯನ್ಸ್‌ಗೆ ಹಿಂತಿರುಗಿದಾಗ ಮತ್ತು ಇಂದಿನವರೆಗೂ ನಾವಿಬ್ಬರೂ ಫ್ರೆಂಡ್ಸ್ ರೀತಿಯಲ್ಲಿಯೇ ಇದ್ದೀವಿ. ಹೀಗಾಗಿ ಇದೀಗ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಕೇವಲ ವದಂತಿ ಎಂದು ತಿಳಿಸಿದ್ದಾರೆ.
ನಾವು ಮೈದಾನದಲ್ಲಿ ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ಭಾರತ ತಂಡದೊಂದಿಗೆ ಇದೇ ರೀತಿ ಮುಂದುವರೆಯಲು ಬಯಸುತ್ತೇವೆ. ಇಲ್ಲಿ ಅಕ್ಷರ್ ಪಟೇಲ್ಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದು ಅವರ ಆಲ್ರೌಂಡರ್ ಪ್ರದರ್ಶನವನ್ನು ಪರಿಗಣಿಸಿ. ಅವರು 2024ರ ಟಿ20 ವಿಶ್ವಕಪ್ನಲ್ಲಿ ಏನು ಮಾಡಿದ್ದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಅಲ್ಲದೆ ಅಕ್ಷರ್ ಬಹಳ ಸಮಯದಿಂದ ತಂಡದಲ್ಲಿದ್ದಾರೆ. ಹೀಗಾಗಿ ವೈಸ್ ಕ್ಯಾಪ್ಟನ್ ಪಟ್ಟ ನೀಡಲಾಗಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ಇದೇ ವೇಳೆ ಗೌತಮ್ ಗಂಭೀರ್ ಅವರ ಕೋಚಿಂಗ್ನಲ್ಲಿ ಆಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ನಾನು ನಾಲ್ಕು ವರ್ಷಗಳಿಂದ ಗಂಭೀರ್ ನಾಯಕತ್ವದಲ್ಲಿ ಆಡಿದ್ದೇನೆ. ಆದ್ದರಿಂದ ಅವರು ಹೇಗೆ ಕೆಲಸ ಮಾಡುತ್ತಾರೆಂದು ನನಗೆ ತಿಳಿದಿದೆ.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಗಂಭೀರ್ ಅವರೊಂದಿಗೆ ಮಾತನಾಡದೆಯೇ, ನಾವು ಏನು ಮಾಡಬೇಕೆಂದು ನಮಗೆ ತಿಳಿದಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿ ವೇಳೆ ಅವರು ತಂಡದ ಜೊತೆ ಇರಲಿಲ್ಲ. ಇದಾಗ್ಯೂ ನಾವು ಉತ್ತಮ ಪ್ರದರ್ಶನ ನೀಡಿರುವುದು ಇದಕ್ಕೆ ಸಾಕ್ಷಿ. ಹೀಗಾಗಿ ಗೌತಮ್ ಗಂಭೀರ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.