ಸಂತಾಪ ಸೂಚಿಸಿ ಯುವ ಆಟಗಾರನನ್ನು ಸಂತೈಸಿದ ಸೂರ್ಯ
India vs Sri Lanka: ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 202 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಕೂಡ 202 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕೇವಲ 2 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಗುರಿಯನ್ನು ಮೊದಲ ಎಸೆತದಲ್ಲೇ ಪೂರೈಸುವ ಮೂಲಕ ಟೀಮ್ ಇಂಡಿಯಾ ಜಯ ಸಾಧಿಸಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಸೂಪರ್ ಫೋರ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಸೋಲಿಲ್ಲದ ಸರದಾರನಾಗಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇತ್ತ ಭಾರತದ ವಿರುದ್ಧದ ಪಂದ್ಯದೊಂದಿಗೆ ಶ್ರೀಲಂಕಾ ತಂಡದ ಏಷ್ಯಾಕಪ್ ಅಭಿಯಾನ ಅಂತ್ಯಗೊಂಡಿದೆ. ಈ ಅಭಿಯಾನದ ಅಂತ್ಯದ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ತಂಡದ ಯುವ ಆಲ್‌ರೌಂಡರ್ ದುನಿತ್ ವೆಲ್ಲಾಲಗೆ ಅವರನ್ನು ಭೇಟಿಯಾಗಿದ್ದು ವಿಶೇಷ.
ಹೃದಯ ಗೆದ್ದ ನಾಯಕ:
ಸೂಪರ್ ಫೋರ್ ಹಂತದ ಅಂತಿಮ ಪಂದ್ಯದ ರೋಮಾಂಚಕ ಗೆಲುವಿನ ಬಳಿಕ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಶ್ರೀಲಂಕಾದ ಆಲ್‌ರೌಂಡರ್ ದುನಿತ್ ವೆಲ್ಲಾಲಗೆ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಅವರನ್ನು ಅಪ್ಪಿಕೊಳ್ಳುವ ಮೂಲಕ ಸಂತೈಸಿದ್ದಾರೆ.
ಸೆಪ್ಟೆಂಬರ್ 18 ರ ರಾತ್ರಿ ಶ್ರೀಲಂಕಾ-ಅಫ್ಘಾನಿಸ್ತಾನ ಪಂದ್ಯದ ಸಮಯದಲ್ಲಿ ದುನಿತ್ ವೆಲ್ಲಲಾಗಗೆ ಅವರ ತಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಇತ್ತ ಅಫ್ಘಾನಿಸ್ತಾನ್ ತಂಡದ ಮೊಹಮ್ಮದ್ ನಬಿ ವೆಲ್ಲಾಲಗೆಯ ಒಂದೇ ಓವರ್ನಲ್ಲಿ ಐದು ಸಿಕ್ಸ್ ಸಿಡಿಸಿದ್ದರು.
ಈ ಸಿಕ್ಸ್ಗಳ ಅಬ್ಬರದ ಬೆನ್ನಲ್ಲೇ ದುನಿತ್ ವೆಲ್ಲಾಲಗೆ ಅವರ ತಂದೆಯು ಹಾರ್ಟ್ ಅಟ್ಯಾಕ್ನಿಂದ ನಿಧನರಾಗಿರುವ ಸುದ್ದಿ ಅಪ್ಪಳಿಸಿತು. ಹೀಗಾಗಿ ಪಂದ್ಯದ ಬಳಿಕ ದುನಿತ್ ಶ್ರೀಲಂಕಾಗೆ ಮರಳಿದ್ದರು. ಅಲ್ಲದೆ ತಂದೆ ಕಾರ್ಯಗಳನ್ನು ಮುಗಿಸಿ ದುನಿತ್ ವೆಲ್ಲಾಲಗೆ ದುಬೈಗೆ ಮರಳಿದ್ದರು.
ಇದಾಗ್ಯೂ ಭಾರತದ ವಿರುದ್ಧದ ಪಂದ್ಯದಲ್ಲಿ ದುನಿತ್ ವೆಲ್ಲಾಲಗೆ ಕಣಕ್ಕಿಳಿದಿರಲಿಲ್ಲ. ಆದರೆ ಪಂದ್ಯದ ಬಳಿಕ ಯುವ ಆಟಗಾರರನ್ನು ಭೇಟಿಯಾದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
This moment 🫶#SonySportsNetwork #DPWorldAsiaCup2025 #INDvSL pic.twitter.com/RGeDVyD02P
— Sony Sports Network (@SonySportsNetwk) September 26, 2025
ಇದೀಗ ಸೂರ್ಯಕುಮಾರ್ ಯಾದವ್, ದುನಿತ್ ವೆಲ್ಲಾಲಗೆ ಅವರನ್ನು ಸಂತೈಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಟೀಮ್ ಇಂಡಿಯಾ ನಾಯಕನ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
