ಮಾಜಿ RCB ಆಟಗಾರನ ಸಿಡಿಲಬ್ಬರ: ಕರ್ನಾಟಕ ತಂಡಕ್ಕೆ ಹೀನಾಯ ಸೋಲು
Syed Mushtaq Ali T20 : 180 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಕರ್ನಾಟಕ ತಂಡ ಈ ಬಾರಿ ಬಿರುಸಿನ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
Syed Mushtaq Ali T20: ಮೊಹಾಲಿಯಲ್ಲಿ ನಡೆದ ಸೈಯದ್ ಮುಷ್ತಾಕ್ ಟೂರ್ನಿಯ ರೌಂಡ್-2 ನಲ್ಲಿನ 2ನೇ ಪಂದ್ಯದಲ್ಲಿ ಕರ್ನಾಟಕ ತಂಡವು ಕೇರಳ (Karnataka vs Kerala) ವಿರುದ್ಧ ಪರಾಜಯಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ತಂಡದ ನಾಯಕ ಸಚಿನ್ ಬೇಬಿ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಆದರೆ ಕೇರಳ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. 9 ಓವರ್ನಲ್ಲಿ ಕೇವಲ 59 ರನ್ ನೀಡಿದ್ದ ಕರ್ನಾಟಕ ತಂಡದ ಬೌಲರ್ಗಳು 2 ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದ್ದರು. ಆದರೆ ಅದು ಯುವ ಸ್ಪೋಟಕ ಬ್ಯಾಟ್ಸ್ಮನ್ ಮೊಹಮ್ಮದ್ ಅಜರುದ್ದೀನ್ (Mohammed Azaruddin) ಕ್ರೀಸ್ಗೆ ಇಳಿಯುವ ತನಕ ಎಂಬುದು ವಿಶೇಷ. ಐಪಿಎಲ್ 2021 ರಲ್ಲಿ RCB ತಂಡದಲ್ಲಿದ್ದ ಕೇರಳದ ಯುವ ದಾಂಡಿಗ ಅಜರ್ ಕರ್ನಾಟಕ ವಿರುದ್ಧ ಅಕ್ಷರಶಃ ಅಬ್ಬರಿಸಿದರು.
ಕಣಕ್ಕಿಳಿಯುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಅಜರ್ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳನ್ನು ಚಚ್ಚಿದರು. ಪರಿಣಾಮ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ್ದ ಕರ್ನಾಟಕ ತಂಡದ ಬೌಲರ್ಗಳು ದ್ವಿತಿಯಾರ್ಧದಲ್ಲಿ ಲಯ ತಪ್ಪಿದರು. ಇದನ್ನೇ ಬಂಡವಾಳ ಮಾಡಿಕೊಂಡ ಅಜರ್ ಕೇವಲ 47 ಎಸೆತಗಳಲ್ಲಿ ಅಜೇಯ 95 ರನ್ ಸಿಡಿಸಿದರು. ಅಷ್ಟೇ ಅಲ್ಲದೆ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇರಳ ತಂಡದ ಮೊತ್ತವನ್ನು 179 ಕ್ಕೆ ತಂದು ನಿಲ್ಲಿಸಿದರು.
180 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಕರ್ನಾಟಕ ತಂಡ ಈ ಬಾರಿ ಬಿರುಸಿನ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ಎಲ್ಆರ್ ಚೇತನ್ ಕೂಡ ಸೊನ್ನೆಯೊಂದಿಗೆ ಹಿಂತಿರುಗಿದರು.
ಇನ್ನು ಅನುಭವಿ ಮನೀಷ್ ಪಾಂಡೆ 9 ರನ್ಗಳಿಸಿದರೆ, ಲವ್ನೀತ್ ಸಿಸೋಡಿಯಾ 36 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಅತ್ತ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಕೇರಳ ಬೌಲರ್ಗಳು 15 ಓವರ್ ಮುಕ್ತಾಯದ ವೇಳೆಗೆ ಕೇವಲ 77 ರನ್ ನೀಡಿ 7 ವಿಕೆಟ್ ಉರುಳಿಸಿದರು. ಅಂತಿಮವಾಗಿ ಕರ್ನಾಟಕ ತಂಡವು 9 ವಿಕೆಟ್ ನಷ್ಟಕ್ಕೆ 126 ರನ್ಗಳಿಸುವ ಮೂಲಕ 53 ರನ್ಗಳಿಂದ ಸೋಲೊಪ್ಪಿಕೊಂಡಿತು. ಕೇರಳ ಪರ ವೈಶಾಖ್ ಚಂದ್ರನ್ 4 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ತ್ ಪಡಿಕ್ಕಲ್ , ಮನೀಶ್ ಪಾಂಡೆ , ಅಭಿನವ್ ಮನೋಹರ್ , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಲವ್ನೀತ್ ಸಿಸೋಡಿಯಾ, ಜಗದೀಶ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್, ಎಲ್ಆರ್ ಚೇತನ್.
ಕೇರಳ ಪ್ಲೇಯಿಂಗ್ 11: ಸಚಿನ್ ಬೇಬಿ (ನಾಯಕ) , ವಿಷ್ಣು ವಿನೋದ್ , ರೋಹನ್ ಕುನ್ನುಮ್ಮಳ್ , ಮೊಹಮ್ಮದ್ ಅಜರುದ್ದೀನ್ , ಕೃಷ್ಣ ಪ್ರಸಾದ್ , ಅಬ್ದುಲ್ ಬಸಿತ್ , ಸಿಜೋಮನ್ ಜೋಸೆಫ್ , ಉನ್ನಿಕೃಷ್ಣನ್, ಬಾಸಿಲ್ ತಂಪಿ , ಕೆಎಂ ಆಸಿಫ್ , ವೈಶಾಕ್ ಚಂದ್ರನ್ , ಸುಧೇಶನ್ ಮಿಧುನ್