
ಆಸ್ಟ್ರೇಲಿಯಾದಲ್ಲಿ ಇಂದಿನಿಂದ ಆರಂಭವಾಗಿರುವ ಟಿ20 ವಿಶ್ವಕಪ್‌ನ (T20 World Cup 2022) ಮೊದಲ ಪಂದ್ಯದಲ್ಲಿ ಶಾಕಿಂಗ್ ರಿಸಲ್ಟ್ ಹೊರಬಿದ್ದಿದೆ. ಇಂದು ನಡೆದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿಯೇ ನಮೀಬಿಯಾ (Namibia) ತಂಡ ಏಷ್ಯನ್ ಚಾಂಪಿಯನ್ ಶ್ರೀಲಂಕಾ (Sri Lanka) ತಂಡಕ್ಕೆ ಮುಜುಗರದ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 108 ರನ್‌ಗಳಿಗೆ ಸರ್ವಪತನಗೊಂಡು 55 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ, ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಶ್ರೀಲಂಕಾ ಯಾರೂ ಊಹಿಸದ ಪ್ರದರ್ಶನ ನೀಡಿ 55 ರನ್‌ಗಳ ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿತು. 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡ 19 ಓವರ್ ಮುಗಿಯುವುದರೊಳಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಮುಜುಗರಕ್ಕೊಳಗಾಯಿತು. ಏಷ್ಯನ್ ಚಾಂಪಿಯನ್ ಶ್ರೀಲಂಕಾಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ಇದರೊಂದಿಗೆ 2022ರ ಟಿ-20 ವಿಶ್ವಕಪ್‌ನಲ್ಲಿ ಭಾರೀ ಮುಖಭಂಗಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ.
ಇದನ್ನೂ ಓದಿ:T20 World cup: ಮಳೆ ಬಂದು ಪಂದ್ಯ ನಿಂತರೆ ಅಥವಾ ಟೈ ಆದರೆ; ಟಿ20 ವಿಶ್ವಕಪ್ ನಿಯಮಗಳು ಹೇಳುವುದೇನು?
ನಮೀಬಿಯಾ ಎದುರಿನ ಸೋಲಿನೊಂದಿಗೆ ಶ್ರೀಲಂಕಾ ತಂಡ ಟಿ20 ವಿಶ್ವಕಪ್ಗೆ ಹೇಗಿ ತಯಾರಿ ನಡೆಸಿದೆ ಎಂಬುದು ಬಟಬಯಲಾಗಿದೆ. ಟಿ20 ಕ್ರಿಕೆಟ್ನಲ್ಲಿ ನಮೀಬಿಯಾ ಶ್ರೀಲಂಕಾವನ್ನು ಸೋಲಿಸಿದ್ದು ಇದೇ ಮೊದಲು. ಅದೂ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಲಂಕಾ ತಂಡ ಈ ರೀತಿಯ ಸೋಲನ್ನು ಕಂಡಿರುವುದು ಉಳಿದ ಪಂದ್ಯಗಳ ಮೇಲೆ ಗಾಡ ಪರಿಣಾಮ ಬೀರಲಿದೆ. ಆದರೆ ಆರಂಭಿಕ ಪಂದ್ಯಗಳಲ್ಲಿ ಇಂತಹ ಮುಜುಗರದ ಸೋಲುಂಡು ಬಳಿಕ ಎಲ್ಲರನ್ನೂ ಅಚ್ಚರಿಗೊಳಿಸುವುದು ಲಂಕಾ ತಂಡಕ್ಕೆ ಹೊಸದೇನಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಏಷ್ಯಾಕಪ್ ಕ್ರೀಡಾಕೂಟವೇ ಸಾಕ್ಷಿಯಾಗಿದೆ. ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಲಂಕಾ ತಂಡ ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆದರೆ ಆ ಬಳಿಕ ಏಷ್ಯಾಕಪ್ ಗೆದ್ದು ಇತಿಹಾಸ ರಚಿಸಿತ್ತು.
ಹತ್ತರ ಗಡಿಯನ್ನೂ ದಾಟದ 7 ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಗೆಲುವಿನ ಹಾದಿಯಲ್ಲಿ ಕಾಣಲೇ ಇಲ್ಲ. ಪಂದ್ಯದುದ್ದಕ್ಕೂ ನಮೀಬಿಯಾ ತನ್ನ ಬಿಗಿಹಿಡಿತವನ್ನು ಸಡಿಸಲೇ ಇಲ್ಲ. ಇಂತಹ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾದ 7 ಬ್ಯಾಟ್ಸ್ಮನ್ಗಳಿಗೆ ಹತ್ತರ ಗಡಿ ಮುಟ್ಟುವುದು ಕಷ್ಟವಾಯಿತು. ತಂಡದ ಬಹುದೊಡ್ಡ ಸ್ಕೋರ್ ನಾಯಕ ದಾಸುನ್ ಶಂಕಾ ಅವರ ಬ್ಯಾಟ್‌ನಿಂದ 29 ರನ್‌ಗಳ ರೂಪದಲ್ಲಿ ಬಂತು.
ಬೌಲಿಂಗ್‌ನಲ್ಲೂ ಮಿಂಚಿದ ನಮೀಬಿಯಾ
ಮತ್ತೊಂದೆಡೆ, ನಮೀಬಿಯಾದ ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ಶ್ರೀಲಂಕಾವನ್ನು 108 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಡೇವಿಡ್ ವೀಸಾ ಹೊರತಾಗಿ, ಫ್ರೈಲಿಂಕ್ ಮತ್ತು ಜೆಜೆ ಸ್ಮಿತ್ ಕೂಡ ದೊಡ್ಡ ಪಾತ್ರ ವಹಿಸಿದರು. ಫ್ರೈಲಿಂಕ್ 28 ಎಸೆತಗಳಲ್ಲಿ 44 ರನ್ ನೀಡಿ 2 ವಿಕೆಟ್ ಪಡೆದರೆ, ಅದೇ ವೇಳೆ 31 ರನ್ ನೀಡಿದ ಜೆಜೆ ಸ್ಮಿತ್ 1 ವಿಕೆಟ್ ಪಡೆದರು. ಡೇವಿಡ್ ವಿಸಾ ಕೂಡ 16 ರನ್ ನೀಡಿ 2 ವಿಕೆಟ್ ಪಡೆದರು. ನಮೀಬಿಯಾದ ಬೌಲರ್‌ಗಳು ಬಿಗಿಯಾದ ದಾಳಿ ನಡೆಸಿದರಿಂದ ಶ್ರೀಲಂಕಾ ಬ್ಯಾಟರ್ಗಳು ರನ್ಗಳಿಸಲು ಪರದಾಡಿದ್ದಲ್ಲದೆ, ಸರಾಗವಾಗಿ ವಿಕೆಟ್ ಒಪ್ಪಿಸುತ್ತಾ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Sun, 16 October 22