ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ (India vs Australia) ಅಮೋಘ ಗೆಲುವು ದಾಖಲಿಸಿದೆ. ಇದರೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಇಷ್ಟು ಮಾತ್ರವಲ್ಲದೆ, ಏಕದಿನ ವಿಶ್ವಕಪ್ನ ಫೈನಲ್ (ODI World Cup 2023) ಸೋಲಿಗೆ ಟೀಂ ಇಂಡಿಯಾ ಸರಿಯಾಗಿ ಸೇಡು ತೀರಿಸಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ನಿರಾಶಾದಾಯಕ ಆರಂಭ ಕಂಡಿತು. ಟೀಂ ಇಂಡಿಯಾ 6 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಶೂನ್ಯ ರನ್ ಗಳಿಸಿ ಔಟಾದರು. ನಂತರ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡ ನಾಯಕ ರೋಹಿತ್ ಅಬ್ಬರದ ಬ್ಯಾಟಿಂಗ್ ಆರಂಭಿಸಿ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗಿಳಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನ ರೋಹಿತ್ ವೃತ್ತಿಜೀವನದಲ್ಲಿ ಅತ್ಯಂತ ವೇಗದ ಅರ್ಧಶತಕ ಎನಿಸಿಕೊಂಡಿತು. ಇನ್ನೊಂದು ಬದಿಯಲ್ಲಿ ರಿಷಬ್ ಪಂತ್ ಕೂಡ ಅವಕಾಶ ಸಿಕ್ಕಾಗ ಬಿಗ್ ಶಾಟ್ ಆಡಿ ತಂಡದ ಇನ್ನಿಂಗ್ಸ್ನ ವೇಗ ಹೆಚ್ಚಿಸಿದರು. ಹೀಗಾಗಿ ಈ ಜೋಡಿ ಆಸ್ಟ್ರೇಲಿಯಾಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಆದರೆ ಈ ವೇಳೆ 15 ರನ್ ಬಾರಿಸಿದ್ದ ಪಂತ್, ಮಾರ್ಕಸ್ ಸ್ಟೊಯಿನಿಸ್ಗೆ ಬಲಿಯಾದರು. ಇಷ್ಟರೊಳಗೆ ರೋಹಿತ್ ಮತ್ತು ಪಂತ್ ನಡುವೆ ಎರಡನೇ ವಿಕೆಟ್ಗೆ 87 ರನ್ಗಳ ಜೊತೆಯಾಟ ಕಂಡು ಬಂದಿತ್ತು.
ಪಂತ್ ವಿಕೆಟ್ ಬಳಿಕ ಅಖಾಡಕ್ಕಿಳಿದ ಸೂರ್ಯಕುಮಾರ್ ಯಾದವ್, ರೋಹಿತ್ ಜೊತೆಗೂಡಿ ವೇಗವಾಗಿ ರನ್ ಕಲೆಹಾಕಿದರು. ಈ ವೇಳೆ ರೋಹಿತ್ಗೆ ವಿಶ್ವಕಪ್ನಲ್ಲಿ ವೇಗದ ಶತಕ ಬಾರಿಸುವ ಅವಕಾಶವಿತ್ತು. ಆದರೆ ರೋಹಿತ್ ನರ್ವಸ್ ನೈಂಟಿಗೆ ಬಲಿಯಾದರು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 90 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಔಟಾದರು. ರೋಹಿತ್ ನಂತರ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಸಣ್ಣ ಆದರೆ ಪ್ರಮುಖ ನಾಕ್ಗಳನ್ನು ಆಡಿದರು. ಇದರಿಂದಾಗಿ ಟೀಂ ಇಂಡಿಯಾ 200ರ ಗಡಿ ತಲುಪಲು ಸಾಧ್ಯವಾಯಿತು.
Rohit Sharma: 8 ಸಿಕ್ಸರ್, 7 ಬೌಂಡರಿ, 92 ರನ್! ಕಾಂಗರೂಗಳ ಸೊಕ್ಕಡಗಿಸಿದ ರೋಹಿತ್ ಶರ್ಮಾ
ತಂಡದ ಪರ ಸೂರ್ಯಕುಮಾರ್ ಯಾದವ್ 31 ರನ್ ಮತ್ತು ಶಿವಂ ದುಬೆ 28 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಲಾ 27 ರನ್ ಮತ್ತು 9 ರನ್ ಬಾರಿಸಿ ಅಜೇಯರಾಗಿ ಮರಳಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್ವುಡ್ 1 ವಿಕೆಟ್ ಪಡೆದರು.
𝙎𝙚𝙢𝙞-𝙛𝙞𝙣𝙖𝙡𝙨 ✅ ✅
𝘼 𝙎𝙪𝙥𝙚𝙧(𝙗) 𝙒𝙞𝙣! 🙌
Make that 3⃣ victories in a row in the Super Eight for #TeamIndia as they beat Australia by 24 runs! 👏👏#T20WorldCup | #AUSvIND pic.twitter.com/LNA58vqWMQ
— BCCI (@BCCI) June 24, 2024
206 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಡೇವಿಡ್ ವಾರ್ನರ್ 6 ರನ್ ಬಾರಿಸಿ ಔಟಾದರು. ಆ ಬಳಿಕ ಜೊತೆಯಾದ ಟ್ರಾವಿಸ್ ಹೆಡ್ ಹಾಗೂ ನಾಯಕ ಮಿಚೆಲ್ ಮಾರ್ಷ್ ಎರಡನೇ ವಿಕೆಟ್ಗೆ 81 ರನ್ಗಳ ಜೊತೆಯಾಟವನ್ನು ಮಾಡಿದರು. ಹೀಗಾಗಿ ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು ಈ ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಭಾರತೀಯ ಬೌಲರ್ಗಳು ಬಲವಾದ ಪುನರಾಗಮನವನ್ನು ಮಾಡಿ, ಪಂದ್ಯಾವಳಿಯಲ್ಲಿ ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರೆಸಿದರು. ಭಾರತದ ಪರ ವೇಗಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದರು.
ಇನ್ನು ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 76 ರನ್ ಗಳಿಸಿದರೆ, ಎರಡೆರಡು ಜೀವದಾನಗಳ ಲಾಭ ಪಡೆದ ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 37 ರನ್ ಬಾರಿಸಿ ಔಟಾದರು. ಗ್ಲೆನ್ ಮ್ಯಾಕ್ಸ್ವೆಲ್ ಇನ್ನಿಂಗ್ಸ್ 20 ರನ್ಗಳಿಗೆ ಅಂತ್ಯಗೊಂಡರೆ, ಆ ಬಳಿಕ ಬಂದ ಯಾವೊಬ್ಬ ಬ್ಯಾಟರ್ನಿಂದಲೂ ಗಮನಾರ್ಹ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ಆಸೀಸ್ ತಂಡ ಭಾರತದ ಮುಂದೆ ಮಂಡಿಯೂರಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 pm, Mon, 24 June 24