T20 World Cup 2024: ನಂದಿನಿ ಪ್ರಾಯೋಜಕತ್ವದ ತಂಡದ ವಿರುದ್ಧ ಪಾಕ್ ತಂಡಕ್ಕೆ ಪ್ರಯಾಸದ ಗೆಲುವು
T20 World Cup 2024: ಟಿ20 ವಿಶ್ವಕಪ್ನಲ್ಲಿ ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಪಾಕಿಸ್ತಾನ ತಂಡ, ಐರ್ಲೆಂಡ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿದೆ. ಇದರೊಂದಿಗೆ ತನ್ನ ಟಿ20 ವಿಶ್ವಕಪ್ ಪಯಣವನ್ನು ಮುಗಿಸಿದೆ. ವಾಸ್ತವವಾಗಿ ಲೀಗ್ ಸುತ್ತಿನ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಪಾಕಿಸ್ತಾನ ತಂಡ ಆರಂಭದಲ್ಲೇ ಟಿ20 ವಿಶ್ವಕಪ್ನಿಂದ ಹೊರಬಿದ್ದಿತ್ತು.
ಟಿ20 ವಿಶ್ವಕಪ್ನಲ್ಲಿ (T20 World Cup 2024) ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಪಾಕಿಸ್ತಾನ ತಂಡ, ಐರ್ಲೆಂಡ್ ತಂಡವನ್ನು (Ireland vs Pakistan) 3 ವಿಕೆಟ್ಗಳಿಂದ ಮಣಿಸಿದೆ. ಇದರೊಂದಿಗೆ ತನ್ನ ಟಿ20 ವಿಶ್ವಕಪ್ ಪಯಣವನ್ನು ಮುಗಿಸಿದೆ. ವಾಸ್ತವವಾಗಿ ಲೀಗ್ ಸುತ್ತಿನ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಪಾಕಿಸ್ತಾನ ತಂಡ ಆರಂಭದಲ್ಲೇ ಟಿ20 ವಿಶ್ವಕಪ್ನಿಂದ ಹೊರಬಿದ್ದಿತ್ತು. ಹೀಗಾಗಿ ಇಂದು ಔಪಾಚಾರಿಕ ಪಂದ್ಯವನ್ನಾಡಿದ ಬಾಬರ್ ಪಡೆ, ಈ ಪಂದ್ಯದಲ್ಲೂ ಪ್ರಯಾಸದ ಗೆಲುವು ದಾಖಲಿಸಿದೆ. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 19ನೇ ಓವರ್ನಲ್ಲಿ ಗೆಲುವಿನ ದಡ ಮುಟ್ಟಿತು.
ಗೆಲುವಿನ ದಡ ಮುಟ್ಟಿಸಿದ ಬಾಬರ್
ಫ್ಲೋರಿಡಾದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ 107 ರನ್‌ಗಳ ಗುರಿ ಬೆನ್ನಟ್ಟುವುದು ಸಹ ಕಷ್ಟಕರವಾಗಿತ್ತು 19ನೇ ಓವರ್ನಲ್ಲಿ ಮಾಜಿ ನಾಯಕ ಶಾಹೀನ್ ಶಾ ಅಫ್ರಿದಿ 2 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಒಂದು ಹಂತದಲ್ಲಿ ಪಾಕಿಸ್ತಾನ 62 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದಾಗ್ಯೂ, ನಾಯಕ ಬಾಬರ್ ಆಝಂ ಮತ್ತು ಅಬ್ಬಾಸ್ ಆಫ್ರಿದಿ ನಡುವೆ ಏಳನೇ ವಿಕೆಟ್‌ಗೆ 33 ರನ್‌ಗಳ ಜೊತೆಯಾಟ ಮತ್ತು ನಂತರ ಶಾಹೀನ್ ಆಫ್ರಿದಿ ಅವರ ಎರಡು ಸಿಕ್ಸರ್‌ಗಳು ಪಾಕಿಸ್ತಾನ ತಂಡವನ್ನು ಗೆಲುವಿನತ್ತ ಮುನ್ನಡೆಸಿದವು.
Pakistan hold their nerve in Florida 🙌
Skipper Babar Azam's steely knock helps them clinch a thriller against Ireland 👏#T20WorldCup | #PAKvIRE | 📝: https://t.co/pPhSAx8xae pic.twitter.com/ak56V4oaSY
— ICC (@ICC) June 16, 2024
ಟಿ20 ವಿಶ್ವಕಪ್ನಿಂದ ಔಟ್
ತಂಡದ ಪರ ನಾಯಕ ಬಾಬರ್ 34 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಅದೇ ಸಮಯದಲ್ಲಿ, ಶಾಹೀನ್ ಅಫ್ರಿದಿ ಐದು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳ ಸಹಾಯದಿಂದ 13 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅಬ್ಬಾಸ್ 21 ಎಸೆತಗಳಲ್ಲಿ 17 ರನ್ ಬಾರಿಸಿದರು. ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಎ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಭಾರತ ಮತ್ತು ಅಮೆರಿಕ ತಂಡಗಳು ಎ ಗುಂಪಿನಿಂದ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿವೆ.
ಆರಂಭದಲ್ಲೇ ಮುಗ್ಗರಿಸಿದ ಐರ್ಲೆಂಡ್
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿತ್ತು. ತಂಡದ ಪರ ಡೆಲಾನಿ 19 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 31 ರನ್ ಗಳಿಸಿದರು. ಒಂದು ಹಂತದಲ್ಲಿ ಐರ್ಲೆಂಡ್ 32 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆದಾಗ್ಯೂ, ಡೆಲಾನಿ ಮತ್ತು ನಂತರ ಮಾರ್ಕ್ ಅಡೇರ್ ಅವರ 15 ರನ್ ಮತ್ತು ಜೋಶುವಾ ಲಿಟಲ್ ಅವರ ಔಟಾಗದೆ 22 ಐರ್ಲೆಂಡ್ ತಂಡವನ್ನು 100 ರನ್‌ಗಳ ದಾಟಿಸಿತು. ಪಾಕ್ ಪರ ಶಾಹೀನ್ ಅಫ್ರಿದಿ ಮತ್ತು ಇಮಾದ್ ವಾಸಿಂ ತಲಾ ಮೂರು ವಿಕೆಟ್ ಪಡೆದರೆ, ಅಮೀರ್ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 pm, Sun, 16 June 24