SL vs SA: ಶ್ರೀಲಂಕಾಗೆ ಸೋಲುಣಿಸಿ ಶುಭಾರಂಭ ಮಾಡಿದ ಸೌತ್ ಆಫ್ರಿಕಾ
T20 World Cup 2024: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಕೇವಲ 40 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಏಂಜೆಲೊ ಮ್ಯಾಥ್ಯೂಸ್ (16) ಆಸರೆಯಾಗುವ ಸೂಚನೆ ನೀಡಿದರು. ಆದರೆ ಈ ವೇಳೆ ಮತ್ತೆ ದಾಳಿಗಿಳಿದ ಅನ್ರಿಕ್ ನೋಕಿಯಾ ಮ್ಯಾಥ್ಯೂಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಟಿ20 ವಿಶ್ವಕಪ್ನ (T20 World Cup 2024) 4ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಜಯ ಸಾಧಿಸಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕ ವನಿಂದು ಹಸರಂಗ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಶ್ರೀಲಂಕಾ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಸೌತ್ ಆಫ್ರಿಕಾ ಬೌಲರ್ಗಳು ಪವರ್ಪ್ಲೇನಲ್ಲೇ ಸಾಬೀತುಪಡಿಸಿದರು.
ಸೌತ್ ಆಫ್ರಿಕಾದ ಕರಾರುವಾಕ್ ದಾಳಿಗೆ ರನ್ಗಳಿಸಲು ಪರದಾಡಿದ ಶ್ರೀಲಂಕಾ ಬ್ಯಾಟರ್ಗಳು ಮೊದಲ 6 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 24 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಹಂತದಲ್ಲಿ ದಾಳಿಗಿಳಿದಿ ಅನ್ರಿಕ್ ನೋಕಿಯಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಕುಸಾಲ್ ಮೆಂಡಿಸ್ (19) ವಿಕೆಟ್ನೊಂದಿಗೆ ಶುಭಾರಂಭ ಮಾಡಿದ ನೋಕಿಯಾ, ಆ ಬಳಿಕ ಅಸಲಂಕಾ (6) ಮತ್ತು ಕಮಿಂದು ಮೆಂಡಿಸ್ (11) ವಿಕೆಟ್ ಪಡೆದರು. ಮತ್ತೊಂದೆಡೆ ಕೇಶವ್ ಮಹಾರಾಜ್ ಲಂಕಾ ನಾಯಕ ವನಿಂದು ಹಸರಂಗ (0) ಹಾಗೂ ಸಮರವಿಕ್ರಮ (0) ರನ್ನು ಶೂನ್ಯಕ್ಕೆ ಔಟ್ ಮಾಡಿದರು.
ಕೇವಲ 40 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ ತಂಡಕ್ಕೆ ಈ ಹಂತದಲ್ಲಿ ಏಂಜೆಲೊ ಮ್ಯಾಥ್ಯೂಸ್ (16) ಆಸರೆಯಾಗುವ ಸೂಚನೆ ನೀಡಿದರು. ಈ ವೇಳೆ ಮತ್ತೆ ದಾಳಿಗಿಳಿದ ಅನ್ರಿಕ್ ನೋಕಿಯಾ ಮ್ಯಾಥ್ಯೂಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ ಶ್ರೀಲಂಕಾ ತಂಡವನ್ನು 19.1 ಓವರ್ಗಳಲ್ಲಿ ಕೇವಲ 77 ರನ್ಗಳಿಗೆ ಆಲೌಟ್ ಮಾಡಿದರು.
78 ರನ್ಗಳ ಸುಲಭ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರೀಝ ಹೆಂಡ್ರಿಕ್ಸ್ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ನಾಯಕ ಐಡೆನ್ ಮಾರ್ಕ್ರಾಮ್ (12) ಕೂಡ ಬೇಗನೆ ನಿರ್ಗಮಿಸಿದರು. ಇನ್ನು 27 ಎಸೆತಗಳಲ್ಲಿ 20 ರನ್ ಬಾರಿಸಿದ ಕ್ವಿಂಟನ್ ಡಿಕಾಕ್ ತಂಡದ ಮೊತ್ತ 50 ರ ಗಡಿದಾಟುತ್ತಿದ್ದಂತೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ 19 ರನ್ ಕಲೆಹಾಕಿದರೆ, ಡೇವಿಡ್ ಮಿಲ್ಲರ್ 6 ರನ್ ಬಾರಿಸಿದರು. ಈ ಮೂಲಕ 16.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದರು. ಈ ಮೂಲಕ ಮೊದಲ ಪಂದ್ಯದಲ್ಲೇ ಸೌತ್ ಆಫ್ರಿಕಾ ತಂಡ 6 ವಿಕೆಟ್ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಕಮಿಂದು ಮೆಂಡಿಸ್ , ಸದೀರ ಸಮರವಿಕ್ರಮ , ಚರಿತ್ ಅಸಲಂಕಾ , ಏಂಜೆಲೋ ಮ್ಯಾಥ್ಯೂಸ್ , ದಸುನ್ ಶಾನಕ , ವನಿಂದು ಹಸರಂಗ (ನಾಯಕ) , ಮಹೀಶ್ ತೀಕ್ಷಣ , ಮತೀಶ ಪತಿರಣ , ನುವಾನ್ ತುಷಾರ.
ಇದನ್ನೂ ಓದಿ: Aaron Jones: ಆರೋನ್ ಅಬ್ಬರಕ್ಕೆ ಯುವರಾಜ್ ಸಿಂಗ್ ದಾಖಲೆ ಧೂಳೀಪಟ
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಟ್ರಿಸ್ಟಾನ್ ಸ್ಟಬ್ಸ್ , ಮಾರ್ಕೊ ಯಾನ್ಸೆನ್ , ಕೇಶವ್ ಮಹಾರಾಜ್ , ಕಗಿಸೊ ರಬಾಡಾ , ಆನ್ರಿಕ್ ನೋಕಿಯಾ, ಒಟ್ನೀಲ್ ಬಾರ್ಟ್‌ಮನ್.