
2026 ರ ಟಿ20 ವಿಶ್ವಕಪ್ (T20 World Cup 2026) ಎರಡನೇ ಸುತ್ತಿಗೆ ಎಂಟ್ರಿಕೊಟ್ಟಿದೆ. ಅಂದರೆ ಗುಂಪು ಹಂತ ಮುಕ್ತಾಯಗೊಂಡಿದ್ದು, ಇಂದಿನಿಂದ ಸೂಪರ್ 8 ಸುತ್ತು ಶುರುವಾಗಿದೆ. ಗುಂಪು ಹಂತದಲ್ಲಿ ಒಟ್ಟಾರೆ 20 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 8 ತಂಡಗಳು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿವೆ. ಈ 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಎರಡನೇ ಗುಂಪಿನ ಮೊದಲ ಸೂಪರ್ 8 ಪಂದ್ಯ ಇಂದು ನಡೆಯಬೇಕಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ (New Zealand vs Pakistan) ತಂಡಗಳು ಮುಖಾಮುಖಿಯಾಗಬೇಕಿತ್ತು.ಆ ಪ್ರಕಾರ, ಉಭಯ ತಂಡಗಳ ನಡುವೆ ಟಾಸ್ ಕೂಡ ನಡೆಯಿತು. ಅದರೆ ಟಾಸ್ ಬಳಿಕ ಎಂಟ್ರಿಕೊಟ್ಟ ವರುಣರಾಯ ಒಂದೇ ಒಂದು ಎಸೆತವನ್ನು ಎಸೆಯಲು ಅನುವು ಮಾಡಿಕೊಡಲಿಲ್ಲ. ಇದರ ಪರಿಣಾಮವಾಗಿ ಪಂದ್ಯವು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಯಿತು.
ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಈ ಪಂದ್ಯದ ಟಾಸ್ ನಡೆದ ನಂತರ ತುಂತುರು ಮಳೆ ಪ್ರಾರಂಭವಾಯಿತು, ಕ್ರಮೇಣ ಮಳೆ ಜೋರಾಯಿತು. ಸುಮಾರು ಎರಡು ಗಂಟೆಗಳ ಕಾಲ ಕಾದ ಬಳಿಕವೂ ಮಳೆ ಕಡಿಮೆಯಾಗಲಿಲ್ಲ. ಹೀಗಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಇದರಿಂದಾಗಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಪಾಯಿಂಟ್‌ಗಳನ್ನು ಹಂಚಿಕೆ ಮಾಡಲಾಯಿತು.
ವಾಸ್ತವವಾಗಿ ಮಳೆಯಿಂದಾಗಿ ಟಾಸ್ ಕೂಡ ವಿಳಂಬವಾಗಿತ್ತು. ತಡವಾಗಿ ನಡೆದ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು. ಆದರೆ ಎರಡೂ ತಂಡಗಳು ಮೈದಾನಕ್ಕಿಳಿಯಲು ಸಿದ್ಧವಾಗುತ್ತಿದ್ದಂತೆ, ಮತ್ತೆ ಮಳೆ ಆರಂಭವಾಯಿತು. 2 ಗಂಟೆ ಕಾಯ್ದರೂ ಪರಿಸ್ಥಿತಿ ಸುಧಾರಿಸಲಿಲ್ಲ, ಹೀಗಾಗಿ ರಾತ್ರಿ 9 ಗಂಟೆಯ ನಂತರ, ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.
ಈ ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ 1 ಅಂಕಕ್ಕೆ ತೃಪ್ತಿಪಡಬೇಕಾಗಿರುವುದರಿಂದ ಎರಡೂ ತಂಡಗಳಿಗೆ ಹಿನ್ನಡೆಯೊಂಟಾಗಿದೆ. ಪಂದ್ಯ ನಡೆದಿದ್ದರೆ, ಒಂದು ತಂಡ ಪೂರ್ಣ 2 ಅಂಕಗಳನ್ನು ಗಳಿಸುತ್ತಿತ್ತು. ಆದರೆ ಮಳೆಯಿಂದಾಗಿ, ಅದು ಆಗಲಿಲ್ಲ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 8 ರ ಗ್ರೂಪ್ 2 ರಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಶ್ರೀಲಂಕಾ ಜೊತೆಯಲ್ಲಿವೆ. ಪಾಕಿಸ್ತಾನದ ಮುಂದಿನ ಪಂದ್ಯ ಫೆಬ್ರವರಿ 24 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು, ನ್ಯೂಜಿಲೆಂಡ್‌ನ ಮುಂದಿನ ಪಂದ್ಯ ಫೆಬ್ರವರಿ 25 ರಂದು ಶ್ರೀಲಂಕಾ ವಿರುದ್ಧ ನಡೆಯಲಿದೆ. ನಂತರ ನ್ಯೂಜಿಲೆಂಡ್ ಫೆಬ್ರವರಿ 27 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಶ್ರೀಲಂಕಾ ಫೆಬ್ರವರಿ 28 ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ.
T20 World Cup 2026: ಗೆಲುವಿನ ಖಾತೆ ತೆರೆಯದ ತಂಡಗಳಿಗೂ ಕೋಟಿ ಬಹುಮಾನ
ನಿಯಮಗಳ ಪ್ರಕಾರ ಸೂಪರ್ 8 ಸುತ್ತಿನಲ್ಲಿ ಎರಡು ಗುಂಪುಗಳಿಂದ ಅಗ್ರ ಎರಡು ಸ್ಥಾನ ಪಡೆಯುವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಹೀಗಾಗಿ ಈ ಸುತ್ತಿನಲ್ಲಿ ಪ್ರತಿಯೊಂದು ಪಂದ್ಯವೂ ಮಾಡು ಇಲ್ಲವೇ ಮಡಿ. ಅದರಲ್ಲಿ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿರುವುದರಿಂದ ಎರಡೂ ತಂಡಗಳ ಸಮಸ್ಯೆಗಳು ಹೆಚ್ಚಿವೆ. ಈಗ ಎರಡೂ ತಂಡಗಳು ಸೆಮಿಫೈನಲ್ ತಲುಪಬೇಕೆಂದರೆ, ಉಳಿದ 2 ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ವೇಳೆ ಉಭಯ ತಂಡಗಳು ಇನ್ನೊಂದು ಪಂದ್ಯವನ್ನು ಸೋತರೂ ಪಂದ್ಯಾವಳಿಯಿಂದ ಹೊರಬೀಳಲಿವೆ. ಅಂತಹ ಪರಿಸ್ಥಿತಿಯಲ್ಲಿ, ಸೂಪರ್ 8 ಸುತ್ತಿನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಮ್ಮ ಮುಂದಿನ ಎರಡು ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತವೆ ಎಂಬುದನ್ನು ಕಾದುನೋಡುಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 pm, Sat, 21 February 26