
ಟೀಮ್ ಇಂಡಿಯಾವನ್ನು ಟಿ20 ಕ್ರಿಕೆಟ್ನಲ್ಲಿ ಈವರೆಗೆ 15 ನಾಯಕರುಗಳು ಮುನ್ನಡೆಸಿದ್ದಾರೆ. ಈ ಹದಿನೈದು ನಾಯಕರುಗಳಲ್ಲಿ ಹದಿನಾಲ್ಕು ಕ್ಯಾಪ್ಟನ್ಗಳು ಬರೆಯದ ಅನಗತ್ಯ ದಾಖಲೆಯೊಂದು ಶ್ರೇಯಸ್ ಅಯ್ಯರ್ ಪಾಲಾಗಿದೆ. ಅದು ಸಹ ಸೋಲುಗಳೊಂದಿಗೆ..!
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳ ಸೋಲನ್ನು ಅನುಭವಿಸಿದೆ. ಇದರೊಂದಿಗೆ ನಾಯಕ ಶ್ರೇಯಸ್ ಅಯ್ಯರ್ ಅವರ ಗೆಲುವಿನ ಕಾಯುವಿಕೆ ಮತ್ತಷ್ಟು ಸುದೀರ್ಘವಾಗಿದೆ.
ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಆರಂಭದ ನಾಲ್ಕೂ ಪಂದ್ಯಗಳಲ್ಲಿ ಒಂದೂ ಜಯ ಕಾಣದ ಭಾರತದ ಮೊದಲ ಕ್ಯಾಪ್ಟನ್ ಎಂಬ ನಿರಾಶಾದಾಯಕ ದಾಖಲೆಗೆ ಅಯ್ಯರ್ ಪಾತ್ರರಾಗಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕನಾಗಿ ಪಾದರ್ಪಣೆ ಮಾಡಿದ ಮೊದಲ ಸರಣಿಯಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿತ್ತು. ಐರ್ಲೆಂಡ್ ವಿರುದ್ಧ ನಡೆದ 2 ಪಂದ್ಯಗಳ ಈ ಸರಣಿಯಲ್ಲಿ 2-0 ಅಂತರದಿಂದ ಸೋತು ಭಾರತ ತಂಡ ಭಾರೀ ಮುಖಭಂಗ ಅನುಭವಿಸಿತ್ತು.
ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಮ್ಯಾಚ್ ಮಳೆಗೆ ಆಹುತಿಯಾಗಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ. ಅಂದರೆ ಶ್ರೇಯಸ್ ನಾಯಕತ್ವದಲ್ಲಿ ಭಾರತ ಆಡಿದ ಮೊದಲ 4 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಸಾಧ್ಯವಾಗಿಲ್ಲ.
ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ದೇಶಗಳ ಪೈಕಿ, ತಮ್ಮ ನಾಯಕತ್ವದ ಮೊದಲ 4 ಟಿ20 ಪಂದ್ಯಗಳಲ್ಲಿ ಒಂದೂ ಗೆಲುವು ಕಾಣದ 9ನೇ ನಾಯಕರಾಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿರುವ ಇತರ ಪ್ರಮುಖ ನಾಯಕರುಗಳೆಂದರೆ…
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಟೀಮ್ ಇಂಡಿಯಾ ಪರ ನಾಯಕರೊಬ್ಬರು ಪಾದಾರ್ಪಣೆ ಬೆನ್ನಲ್ಲೇ ಸತತ ಮೂರು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲು. ಅಂದರೆ ಅಯ್ಯರ್ ಕ್ಯಾಪ್ಟನ್ ಆದ ಬಳಿಕ ಟೀಮ್ ಇಂಡಿಯಾ ಸತತ ಮೂರು ಮ್ಯಾಚ್ಗಳಲ್ಲೂ ಪರಾಜಯಗೊಂಡಿದೆ.
ಅಲ್ಲದೆ 2021ರ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಸತತವಾಗಿ ಮೂರು ಟಿ20 ಪಂದ್ಯಗಳನ್ನು ಸೋತಿದೆ. ಈ ಸೋಲುಗಳಿಂದ ಶ್ರೇಯಸ್ ಅಯ್ಯರ್ ಪಡೆ ಭಾರೀ ನಿರಾಶೆ ಎದುರಿಸಿದ್ದು ಮಾತ್ರವಲ್ಲದೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ಆಟವಲ್ಲ… ಹೊಡೆದಾಟ… ಕೈಕೈ ಮಿಲಾಯಿಸಿದ ಫ್ರಾನ್ಸ್ vs ಪರಾಗ್ವೆ ಆಟಗಾರರು!
ಈ ಸರಣಿಯಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಟ್ರೋಫಿ ಗೆಲ್ಲುವ ಆಶಯವನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ತಂಡವು ಮುಂದಿನ ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ನ್ಯಾಟಿಂಗ್ಹ್ಯಾಮ್ನಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಕಂಬ್ಯಾಕ್ ಅನ್ನು ನಿರೀಕ್ಷಿಸಬಹುದು.