ವೆಂಕಟೇಶ್ ಪ್ರಸಾದ್ ಅವರ ಹೊಸ ಫೋಟೋ ನೋಡಿ ದಿಗ್ಭ್ರಮೆಗೊಂಡ ಅಭಿಮಾನಿಗಳು
Team India: ಟೀಮ್ ಇಂಡಿಯಾ ಪರ 96 ಟೆಸ್ಟ್ ಮತ್ತು 196 ಏಕದಿನ ವಿಕೆಟ್ ಪಡೆದಿರುವ ವೆಂಕಟೇಶ್ ಪ್ರಸಾದ್ ಅವರು 2007ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದರು.
ಅದು 2007…ಟಿ20 ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ (Team India) ಚಾಂಪಿಯನ್ ಪಟ್ಟಕ್ಕೇರಿತು. ಅದು ಕೂಡ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಎಂಬುದು ವಿಶೇಷ. ಈ ಗೆಲುವಿನ ರೂವಾರಿಗಳಾಗಿ ಇಂದಿಗೂ ಜನರು ನೆನಪಿಸಿಕೊಳ್ಳುವುದು ಧೋನಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್, ಇರ್ಫಾನ್ ಪಠಾಣ್ ಅವರನ್ನು…ಆದರೆ ತೆರೆ ಹಿಂದೆಯೇ ಪಾಕಿಸ್ತಾನ್ ತಂಡವನ್ನು ಮಣಿಸಲು ಕನ್ನಡಿಗ ಕೂಡ ಪ್ಲ್ಯಾನ್ ರೂಪಿಸಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಹೌದು, ಅಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ವೆಂಕಟೇಶ್ ಪ್ರಸಾದ್ ಇದ್ದರು. ಒಂದಾರ್ಥದಲ್ಲಿ ಐತಿಹಾಸಿಕ ಗೆಲುವಿಗೆ ಅವರು ಕೂಡ ಪ್ರಮುಖ ಕಾರಣಕರ್ತರಾಗಿದ್ದರು. ಆದರೆ ಆ ಬಳಿಕ ವೆಂಕಿಯ ಹೆಸರು ಎಲ್ಲೂ ಕೂಡ ರಾರಾಜಿಸಿರಲಿಲ್ಲ ಎಂಬುದೇ ಸತ್ಯ.
ಇದಾದ ಬಳಿಕ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮುಂದುವರೆದಿದ್ದ ವೆಂಕಟೇಶ್ ಪ್ರಸಾದ್, ಆ ಬಳಿಕ ಐಪಿಎಲ್ನಲ್ಲೂ ಬೌಲಿಂಗ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದ ವೆಂಕಟೇಶ್ ಪ್ರಸಾದ್ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಂಚಿಕೊಂಡ ಫೋಟೋವೊಂದು ಹಲವು ಚರ್ಚೆಗಳಿಗೆ ಕಾರಣವಾಗಿತ್ತು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯ ತಿಳಿಸಿ ವೆಂಕಿ ಹಾಕಿದ ಪೋಸ್ಟ್ನಲ್ಲಿ ಅವರು ತುಂಬಾ ಸಪೂರವಾಗಿ ಕಾಣಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಅಲ್ಲದೆ ಟ್ವಿಟರ್‌ನಲ್ಲಿ ಅಭಿಮಾನಿಗಳು ಪ್ರಸಾದ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸಿದ ಮಾಜಿ ವೇಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಅಭಿಮಾನಿಯೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ವೆಂಕಟೇಶ್ ಪ್ರಸಾದ್, ಸಾಧನಾ ಮಾಡುತ್ತಿರುವುದರಿಂದ ಸಾಕಷ್ಟು ತೂಕ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಅಲ್ಲದೆ ಆರೋಗ್ಯವಾಗಿದ್ದೇನೆ. ನಾನು ತಿರುವಂದಮಲೈನಲ್ಲಿರುವ ಅರುಣಾಚಲ ಪರ್ವತದಲ್ಲಿ ಗಿರಿವಾಲಂ ಮಾಡುತ್ತಿದ್ದೆ. ಇದರಿಂದ ಸ್ವಲ್ಪ ತೂಕವನ್ನು ಕಳೆದುಕೊಂಡಿದ್ದೇನೆ. ಅಲ್ಲದೆ ಶೀಘ್ರದಲ್ಲೇ ತೂಕವನ್ನು ಹೆಚ್ಚಿಸುತ್ತೇನೆ. ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದರೊಂದಿಗೆ ವೆಂಕಟೇಶ್ ಪ್ರಸಾದ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮೂಡಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ.
Freedom in the mind, Faith in the words, Pride in our Souls.
Salute the nation on this #IndependenceDay pic.twitter.com/M8tmJseAci
— Venkatesh Prasad (@venkateshprasad) August 15, 2022
ಟೀಮ್ ಇಂಡಿಯಾ ಪರ 96 ಟೆಸ್ಟ್ ಮತ್ತು 196 ಏಕದಿನ ವಿಕೆಟ್ ಪಡೆದಿರುವ ವೆಂಕಟೇಶ್ ಪ್ರಸಾದ್ ಅವರು 2007ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದರು. ಇದಾದ ನಂತರ 2009ರಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಲ್ಲದೆ, ಅವರು RCB ಮತ್ತು ಕಿಂಗ್ಸ್ XI ಪಂಜಾಬ್ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು.