
ಟೀಮ್ ಇಂಡಿಯಾ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಭಾರತ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಈ ಬದಲಾವಣೆಯೊಂದಿಗೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಸಪೋರ್ಟ್ ಸ್ಟಾಫ್ ಪೈಕಿ ಕನಿಷ್ಠ ಒಬ್ಬರು ತಂಡದಿಂದ ಹೊರಬೀಳಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎದುರಾದ ಐತಿಹಾಸಿಕ ಸೋಲು ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿನ ಕಳಪೆ ಪ್ರದರ್ಶನಗಳ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಜುಲೈ 19 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಂಡ ತಕ್ಷಣವೇ ಬಿಸಿಸಿಐ ಮಹತ್ವದ ಪ್ರದರ್ಶನ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಯ ಬಳಿಕ ಕೋಚಿಂಗ್ ಸಿಬ್ಬಂದಿಯನ್ನು ಕೈ ಬಿಡುವ ಬಗ್ಗೆ ಪ್ರಕಟಣೆ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ತಂಡದ ಒಳಗೆ ತಾಂತ್ರಿಕ ಮತ್ತು ತಂತ್ರಗಾರಿಕೆಯ ವಿಷಯಗಳಲ್ಲಿ ಕೋಚಿಂಗ್ ಸಿಬ್ಬಂದಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಗಳು ತಿಳಿಸಿವೆ. ಇದೇ ಕಾರಣದಿಂದಾಗಿ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
2024ರಲ್ಲಿ ಗೌತಮ್ ಗಂಭೀರ್ ಜೊತೆಗೆ 2+1 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಸಪೋರ್ಟ್ ಸ್ಟಾಫ್ ಪೈಕಿ ಪ್ರಮುಖ ಕೋಚ್ ಒಬ್ಬರು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐಪಿಎಲ್ ಫ್ರಾಂಚೈಸಿಯೊಂದರ ಜೊತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅವರ ಆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಕಂಡು ಸರಣಿ ಕೈಚೆಲ್ಲಿದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಿಯಾನ್ ಟೆನ್ ಡೊಶ್ಚಾಟೆ , ಟೀಮ್ ಇಂಡಿಯಾದ ಪ್ರದರ್ಶನದ ವಿಮರ್ಶಿಸಿದ್ದರು.
ಪ್ರಸ್ತುತ ಟಿ20 ವಿಶ್ವಚಾಂಪಿಯನ್ ಆಗಿರುವ ಭಾರತ ತಂಡವು, ವಿದೇಶಿ ಮಣ್ಣಿನಲ್ಲಿ ಅನುಭವಿಸುತ್ತಿರುವ ಸರಣಿ ಸೋಲುಗಳಿಂದಾಗಿ, ಇದೀಗ ವಿದೇಶಿ ಪಿಚ್ನಲ್ಲಿ ”ಕಡಿಮೆ ಸಾಧನೆ ಮಾಡುವವರು” ಎಂಬ ಹಣೆಪಟ್ಟಿ ಹೊಂದಿದೆ. ಇದನ್ನು ಮೊದಲು ಕಳಚಬೇಕಾದ ತುರ್ತು ಅಗತ್ಯವಿದೆ ಎಂದು ರಿಯಾನ್ ಟೆನ್ ಡೊಶ್ಚಾಟೆ ಹೇಳಿದ್ದರು.
ಭಾರತದ ಫ್ಲ್ಯಾಟ್ ಪಿಚ್‌ಗಳಲ್ಲಿ ರನ್ ಮಳೆ ಹರಿಸುವ ಬ್ಯಾಟರ್‌ಗಳು, ಐರ್ಲೆಂಡ್ ಮತ್ತು ಇಂಗ್ಲೆಂಡ್‌ನ ಸೀಮ್-ಫ್ರೆಂಡ್ಲಿ ಮತ್ತು ತೇವಾಂಶಭರಿತ ಪಿಚ್‌ಗಳ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಟೆನ್ ಡೊಶ್ಚಾಟೆ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಲಾರ್ಡ್ಸ್ ಮೈದಾನದಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ
ಈ ಹೇಳಿಕೆಗಳು ಟೆನ್ ಡೊಶ್ಚಾಟೆ ಪಾಲಿಗೆ ಮುಳುವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಹೀಗಾಗಿ ಗೌತಮ್ ಗಂಭೀರ್ ಕೋಚಿಂಗ್ ಬಳಗದಿಂದ ರಿಯಾನ್ ಟೆನ್ ಡೊಶ್ಚಾಟೆ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.