Asia Cup 2025: ಕಳಪೆ ಫೀಲ್ಡಿಂಗ್ ವಿಚಾರದಲ್ಲಿ ಪಾಕಿಸ್ತಾನವನ್ನೇ ಹಿಂದಿಕ್ಕಿದ ಟೀಂ ಇಂಡಿಯಾ
Asia Cup 2025: ಭಾರತ ತಂಡ ಏಷ್ಯಾಕಪ್ ಫೈನಲ್ ಪ್ರವೇಶಿಸಿದ್ದರೂ, ಅದರ ಕಳಪೆ ಫೀಲ್ಡಿಂಗ್ ಗಂಭೀರ ಕಳವಳವಾಗಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡವಾಗಿದೆ. ಅಭಿಷೇಕ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಅವರ ಕಳಪೆ ಫೀಲ್ಡಿಂಗ್ ವಿಶೇಷವಾಗಿ ನಿರಾಶಾದಾಯಕ. ದುಬೈ ಮೈದಾನದ ಲೈಟಿಂಗ್ ಕೂಡ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಫೈನಲ್‌ನಲ್ಲಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳದಿದ್ದರೆ ಭಾರತಕ್ಕೆ ತೊಂದರೆಯಾಗಬಹುದು.

ಏಷ್ಯಾಕಪ್ (Asia Cup 2025) ಫೈನಲ್‌ಗೆ ಭಾರತ ಸ್ಥಾನ ಖಚಿತಪಡಿಸಿಕೊಂಡಿದೆ. ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ, ಟೀಂ ಇಂಡಿಯಾ (Team India) 12 ನೇ ಬಾರಿಗೆ ಫೈನಲ್ ತಲುಪಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾಕ್ಕೆ ಅದೊಂದು ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಷ್ಟು ದಿನ ಪಾಕಿಸ್ತಾನ ತಂಡ ಯಾವ ವಿಷಯಕ್ಕೆ ಸಬಂಧಿಸಿದಂತೆ ನಗೆಪಾಟಲಿಗೀಡಾಗುತಿತ್ತೋ ಇದೀಗ ಅದೇ ವಿಷಯಕ್ಕೆ ಟೀಂ ಇಂಡಿಯಾವನ್ನು ವ್ಯಂಗ್ಯ ಮಾಡಲಾಗುತ್ತಿದೆ. ವಾಸ್ತವವಾಗಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡವೆಂಬ ಬೇಡದ ದಾಖಲೆಯನ್ನು ಟೀಂ ಇಂಡಿಯಾ ತನ್ನ ಖಾತೆಗೆ ಹಾಕಿಕೊಂಡಿದೆ.
ಭಾರತದ ಕಳಪೆ ಫೀಲ್ಡಿಂಗ್ ಪ್ರದರ್ಶನ
ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡಗಳ ಬಗ್ಗೆ ಹೇಳುವುದಾದರೆ,, ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲಿದ್ದು, ಇದುವರೆಗೆ ಬರೋಬ್ಬರಿ 12 ಕ್ಯಾಚ್‌ಗಳನ್ನು ಕೈಚೆಲ್ಲಿದೆ. ಭಾರತದ ಕ್ಯಾಚಿಂಗ್ ಸರಾಸರಿ ಕೇವಲ 67.5 ಪ್ರತಿಶತ ಆಗಿದೆ. ಇತ್ತ ಈ ವಿಚಾರದಲ್ಲಿ ಗಮನಾರ್ಹ ಸುಧಾರಣೆ ಕಂಡಿರುವ ಪಾಕಿಸ್ತಾನದ ಕ್ಯಾಚಿಂಗ್ ಸರಾಸರಿ ಶೇ. 86.7 ರಷ್ಟಾಗಿದೆ. ನಾಚಿಕೆಗೇಡಿನ ಸಂಗತಿಯೆಂದರೆ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಒಮಾನ್ ಮತ್ತು ಯುಎಇ ತಂಡಗಳು ಕೂಡ ಟೀಂ ಇಂಡಿಯಾಕ್ಕಿಂತ ಉತ್ತಮ ಕ್ಯಾಚಿಂಗ್ ಸರಾಸರಿ ಹೊಂದಿವೆ. ಭಾರತದ ನಂತರ, ಹಾಂಗ್ ಕಾಂಗ್ ಅತಿ ಹೆಚ್ಚು (11) ಕ್ಯಾಚ್‌ಗಳನ್ನು ಕೈಬಿಟ್ಟಿದ್ದರೆ, ಬಾಂಗ್ಲಾದೇಶ 8, ಶ್ರೀಲಂಕಾ 6, ಅಫ್ಘಾನಿಸ್ತಾನ ಮತ್ತು ಓಮನ್ ತಲಾ 4 ಕ್ಯಾಚ್‌ಗಳನ್ನು ಕೈಬಿಟ್ಟಿವೆ. ಪಾಕಿಸ್ತಾನ 3 ಕ್ಯಾಚ್‌ಗಳನ್ನು ಕೈಬಿಟ್ಟಿದ್ದರೆ, ಯುಎಇ ಕೇವಲ 2 ಕ್ಯಾಚ್‌ಗಳನ್ನು ಕೈಬಿಟ್ಟಿದೆ.
Asia cup 2025: ಟಿ20 ಏಷ್ಯಾಕಪ್ ಸೂಪರ್ ಸುತ್ತಿನಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು?
ತಪ್ಪು ತಿದ್ದಿಕೊಳ್ಳುವುದು ಯಾವಾಗ?
ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್‌ನಿಂದಾಗಿ ಟೀಂ ಇಂಡಿಯಾ ಏಷ್ಯಾಕಪ್ ಫೈನಲ್‌ಗೆ ಅರ್ಹತೆ ಪಡೆದಿದೆ. ಆದರೆ ಫೀಲ್ಡಿಂಗ್ ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ಅಭಿಷೇಕ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಫೀಲ್ಡಿಂಗ್ ವಿಷಯದಲ್ಲಿ ಹೆಚ್ಚು ನಿರಾಶೆಗೊಳಿಸಿದ್ದಾರೆ. ಇಬ್ಬರೂ ಆಟಗಾರರು ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಗೆಲುವಿನ ನಂತರ, ಭಾರತದ ಫೀಲ್ಡಿಂಗ್ ಗಂಭೀರ ಸಮಸ್ಯೆಯಾಗಿದೆ. ಕಳಪೆ ಕ್ಯಾಚಿಂಗ್‌ಗೆ ಒಂದು ಕಾರಣವೆಂದರೆ ದುಬೈ ಮೈದಾನದ ಫ್ಲಡ್‌ಲೈಟ್‌ಗಳು, ಇವುಗಳನ್ನು ಕಂಬಗಳ ಬದಲಿಗೆ ಮೇಲ್ಛಾವಣಿಯ ಮೇಲೆ ಅಳವಡಿಸಲಾಗಿದೆ. ಇದು ಆಟಗಾರರಿಗೆ ಚೆಂಡನ್ನು ನಿರ್ಣಯಿಸಲು ಕಷ್ಟಕರವಾಗಿಸುತ್ತದೆ. ಟೀಂ ಇಂಡಿಯಾ ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು, ಇಲ್ಲದಿದ್ದರೆ ಫೈನಲ್‌ನಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
