
2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಿನಿಂದಲೇ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಇದರ ಭಾಗವಾಗಿ, ಮೆಗಾ ಟೂರ್ನಿ ಆರಂಭಕ್ಕೂ ಮುನ್ನ ಸೌತ್ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ 4 ರಿಂದ 6 ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಲು ಬಿಸಿಸಿಐ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ ಮಾತುಕತೆ ನಡೆಸುತ್ತಿವೆ.
2027ರ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವುದರಿಂದ, ಈ ಪ್ರವಾಸವು ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕ ಎನಿಸಿಕೊಳ್ಳಲಿದೆ.
ಸಾಮಾನ್ಯವಾಗಿ ದ್ವಿಪಕ್ಷೀಯ ಸರಣಿಗಳಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ಆದರೆ, ವಿಶ್ವಕಪ್ ಸಿದ್ಧತೆಗಾಗಿ ಈ ಬಾರಿ 4 ರಿಂದ 6 ಪಂದ್ಯಗಳನ್ನು ಆಯೋಜಿಸಲು ಉಭಯ ಮಂಡಳಿಗಳು ಒಲವು ತೋರಿವೆ.
ಈ ಸರಣಿಯು 2027ರ ದ್ವಿತೀಯಾರ್ಧದಲ್ಲಿ, ಅಂದರೆ ಐಪಿಎಲ್ 2027 ಮುಗಿದ ನಂತರ ಮತ್ತು ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯುವ ಸಾಧ್ಯತೆಯಿದೆ.
ಇನ್ನು ಈ ಸರಣಿ ಆಯೋಜನೆಯ ಮುಖ್ಯ ಉದ್ದೇಶ, ಸೌತ್ ಆಫ್ರಿಕಾದ ವೇಗ ಹಾಗೂ ಬೌನ್ಸ್ ಪ್ರಧಾನ ಪಿಚ್‌ಗಳಿಗೆ ಭಾರತೀಯ ಆಟಗಾರರು ಬೇಗನೆ ಹೊಂದಿಕೊಳ್ಳುವಂತೆ ಮಾಡುವುದಾಗಿದೆ. ಆ ಮೂಲಕ ಟೀಮ್ ಇಂಡಿಯಾವನ್ನು ಮುಂಬರುವ ಏಕದಿನ ವಿಶ್ವಕಪ್‌ಗೆ ಸಂಪೂರ್ಣವಾಗಿ ಸಜ್ಜುಗೊಳಿಸುವುದು ಬಿಸಿಸಿಐನ ತಂತ್ರವಾಗಿದೆ.
2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಮುಂಬರುವ ಟೂರ್ನಿಗೆ ಆಫ್ರಿಕಾ ಖಂಡದ ಪ್ರಮುಖ ಮೂರು ದೇಶಗಳಾದ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.
ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು
ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಟೀಮ್ ಇಂಡಿಯಾ ಈಗಿನಿಂದಲೇ ರಣತಂತ್ರಗಳನ್ನು ಹೆಣೆಯಲಾರಂಭಿಸಿದೆ. ಸೌತ್ ಆಫ್ರಿಕಾದ ಕಠಿಣ ಹಾಗೂ ಸವಾಲಿನ ಪಿಚ್‌ಗಳಲ್ಲಿ ಆಯೋಜನೆಯಾಗಲಿರುವ ಈ ಮೆಗಾ ಏಕದಿನ ಸರಣಿಯು, ಭಾರತೀಯ ಆಟಗಾರರ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆಯಾಗುವುದರಲ್ಲಿ ಸಂದೇಹವಿಲ್ಲ. 2023ರ ವಿಶ್ವಕಪ್‌ನಲ್ಲಿ ಕೈತಪ್ಪಿದ ಪ್ರಶಸ್ತಿಯನ್ನು ಈ ಬಾರಿ ಆಫ್ರಿಕಾ ಮಣ್ಣಿನಲ್ಲಿ ಎತ್ತಿಹಿಡಿಯಲು ಬಿಸಿಸಿಐ ರೂಪಿಸಿರುವ ಈ ‘ಮಾಸ್ಟರ್ ಪ್ಲಾನ್’ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.