
ಭಾರತ ಕ್ರಿಕೆಟ್ ತಂಡ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟೀಂ ಇಂಡಿಯಾ (Team India) ಮುಂದಿನ ತಿಂಗಳು ಏಕದಿನ ಮತ್ತು ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ಬಿಸಿಸಿಐ (BCCI) ತಿಳಿಸಿತ್ತು. ಆದರೆ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿರುವ ಟೀಂ ಇಂಡಿಯಾ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ (India’s Sri Lanka Tour) ಮಾಡಲಿದೆ ಎಂದು ವರದಿಯಾಗಿದೆ. ಈ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದು ನಿಜವಾದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಅಬ್ಬರಿಸುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.
ಮೇಲೆ ಹೇಳಿದಂತೆ ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ತಂಡವು ಬಿಳಿ ಚೆಂಡಿನ ಸರಣಿಯನ್ನು ಆಡಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದರಿಂದಾಗಿ ಸರಣಿಯನ್ನು ಸೆಪ್ಟೆಂಬರ್ 2026 ರವರೆಗೆ ಮುಂದೂಡಲಾಗಿದೆ. ಈಗ ಭಾರತೀಯ ತಂಡಕ್ಕೆ ಆಗಸ್ಟ್ ಕ್ಯಾಲೆಂಡರ್ ಖಾಲಿಯಾಗಿರುವ ಕಾರಣ ಬಿಸಿಸಿಐ ವೈಟ್ ಬಾಲ್ ಸರಣಿಯನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದೆ. ಪ್ರಾಸಂಗಿಕವಾಗಿ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಪ್ರೀಮಿಯರ್ ಲೀಗ್ ಅನ್ನು ಮುಂದೂಡಲಾಗಿದೆ. ಇದರಿಂದಾಗಿ ಶ್ರೀಲಂಕಾದ ಆಗಸ್ಟ್ ವೇಳಾಪಟ್ಟಿಯೂ ಖಾಲಿಯಾಗಿದೆ. ಸುದ್ದಿವಾಹಿನಿಯ ವರದಿಯ ಪ್ರಕಾರ, ಏಕದಿನ ಮತ್ತು ಟಿ20 ಸರಣಿಗಾಗಿ ಮಾತುಕತೆಗಳು ನಡೆಯುತ್ತಿದ್ದು, ಭಾರತ ಶ್ರೀಲಂಕಾ ಪ್ರವಾಸ ಮಾಡುವ ಸಾಧ್ಯತೆಯಿದೆ.
IND vs BAN: ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಿದ ಬಿಸಿಸಿಐ
ಭಾರತ-ಶ್ರೀಲಂಕಾ ಸರಣಿಯ ದಿನಾಂಕಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ, ಆದರೆ ಶ್ರೀಲಂಕಾ ಆಗಸ್ಟ್ 29 ರಿಂದ ಜಿಂಬಾಬ್ವೆ ಪ್ರವಾಸ ಮಾಡಬೇಕಾಗಿರುವುದರಿಂದ ಆಗಸ್ಟ್ ಮಧ್ಯದಲ್ಲಿ ಈ ಸರಣಿಯನ್ನು ನಡೆಸಬಹುದು ಎಂದು ಊಹಿಸಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಕೊನೆಯ ಪಂದ್ಯವು ಜುಲೈ 2024 ರಲ್ಲಿ ನಡೆಯಿತು, ಇದು ಭಾರತದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಪ್ರವಾಸವೂ ಆಗಿತ್ತು. ಆದರೆ ಆ ಪ್ರವಾಸದಲ್ಲಿ ಭಾರತ ತಂಡವು ಟಿ20 ಸರಣಿಯನ್ನು ಗೆದ್ದರೆ, ಶ್ರೀಲಂಕಾವು ಏಕದಿನ ಸರಣಿಯಲ್ಲಿ ಭಾರತವನ್ನು ಸೋಲಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Wed, 9 July 25