ಟಿ20 ವಿಶ್ವಕಪ್ ದೂರವಿಲ್ಲ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಿರುವವರು ಪ್ರದರ್ಶನಗಳಲ್ಲಿ ಸ್ಥಿರತೆ ಕಾಯ್ದುಕೊಂಡರೆ ಆಯ್ಕೆಯಾಗುತ್ತಾರೆ: ಅಜಿತ್ ಅಗರ್ಕರ್
ಕುಲ್ದೀಪ್ ಕೊನೆಯ ಬಾರಿಗೆ ಭಾರತಕ್ಕೆ ಟಿ20 ಪಂದ್ಯ ಆಡಿದ್ದು ಜನೆವರಿ 2020ರಲ್ಲಿ. ಅವರಿಗೆ ಹೆಚ್ಚು ಅವಕಾಶಗಳನ್ನು ನೀಡದಿರುವುದು ಸಮಂಜಸವಲ್ಲ ಅಂತ ಅಗರ್ಕರ್ ಹೇಳಿದ್ದಾರೆ.
2019 ವಿಶ್ವಕಪ್ಗೆ ಮೊದಲು ರಿಸ್ಟ್ ಸ್ಪಿನ್ನರ್ಗಳಾಗಿರುವ ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಜೊತೆಯಾಗಿ ಆಡಿದಾಗಲೆಲ್ಲ ಟೀಮ್ ತಮ್ಮ ಪಚಂಡ ಬೌಲಿಂಗ್ ಪ್ರದರ್ಶನಗಳ ಮೂಲಕ ಟೀಮ್ ಇಂಡಿಯಾಗೆ ಮೇಲುಗೈಗಳನ್ನು ಒದಗಿಸಿದ್ದಾರೆ. ವಿಶ್ವಕಪ್ಗೆ ಮೊದಲು ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅವರಿಬ್ಬರ ಹೆಸರಿತ್ತು. ಬೌಲಿಂಗ್ನಲ್ಲಿ ಪ್ರದರ್ಶಿಸುತ್ತಿದ್ದ ನಿಯಂತ್ರಣ, ವೈವಿಧ್ಯತೆ ಮತ್ತು ಫ್ಲೈಟ್ ಮೂಲಕ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.
ಆದರೆ ವಿಶ್ವಕಪ್ ನಂತರದ ದಿನಗಳಲ್ಲಿ ಚಿತ್ರಣವೇ ಬದಲಾಗಿದೆ. ಕುಲ್ದೀಪ್ ಯಾದವ್ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದಾರೆ ಮತ್ತು ಯುಜ್ವೇಂದ್ರ ಚಹಲ್ ವಿಕೆಟ್ ಪಡೆಯುವ ಕಲೆಯನ್ನು ಮರೆತವರ ಹಾಗೆ ಬೌಲ್ ಮಾಡುತ್ತಿದ್ದಾರೆ. ಸಾಧಾರಣವೆನಿಸುತ್ತಿರುವ ಅವರಿಬ್ಬರ ಪ್ರದರ್ಶನಗಳು ಟೀಮ್ ಇಂಡಿಯಾದ ಮೇಲೆ ಪ್ರಭಾವ ಬೀರುತ್ತಿವೆ ಎಂದು ಹೇಳಿರುವ ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರು ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶ ಗಿಟ್ಟಿಸಬೇಕಾದರೆ, ಕುಲ್ದೀಪ್ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಬೇಕು ಎಂದಿದ್ದಾರೆ.
ಕುಲ್ದೀಪ್ ಕೊನೆಯ ಬಾರಿಗೆ ಭಾರತಕ್ಕೆ ಟಿ20 ಪಂದ್ಯ ಆಡಿದ್ದು ಜನೆವರಿ 2020ರಲ್ಲಿ. ಅವರಿಗೆ ಹೆಚ್ಚು ಅವಕಾಶಗಳನ್ನು ನೀಡದಿರುವುದು ಸಮಂಜಸವಲ್ಲ ಅಂತ ಅಗರ್ಕರ್ ಹೇಳಿದ್ದಾರೆ.
‘ಸರಣಿಗಳಿಗೆ ಕೈಬಿಟ್ಟು ಅವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಆತ್ಮವಿಶ್ವಾಸ ಕಳೆದುಕೊಳ್ಳುವ ಅವಶ್ಯಕತೆಯಿಲ್ಲ. ಉತ್ತಮವಅಗು ಬೌಲ್ ಮಾಡುವುದನ್ನು ಮುಂದುವರಿಸಬೇಕು. ತಮ್ಮ ಹಿಂದೆ ಯುವ ಆಟಗಾರರು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎನ್ನುವುದನ್ನು ಚಹಲ್ ಮತ್ತು ಕುಲ್ದೀಪ್ ಮರೆಯಬಾರದು. ಸ್ಥಾನಗಳಿಗೆ ಪೈಪೋಟಿ ನಡೆದಾಗಲೇ ಅದು ತಂಡಕ್ಕೆ ಪ್ರಯೋಜನವಾಗುತ್ತದೆ,’ ಎಂದು ವರ್ಚ್ಯುಯಲ್ ಸುದ್ದಿಗೋಷ್ಟಿ ಒಂದರಲ್ಲಿ ಅಗರ್ಕರ್ ಹೇಳಿದ್ದಾರೆ.
‘ಕುಲ್ದೀಪ್ ಮತ್ತು ಚಹಲ್ ಒಟ್ಟಿಗೆ ಆಡುವುದು ನಿಂತ ಮೇಲೆ ಸೀಮಿತ ಓವರ್ ಪಂದ್ಯಗಳಲ್ಲಿ ಭಾರತ ಸಮಸ್ಯೆ ಎದುರಿಸುತ್ತಿದೆ. ಆದರೆ, ಯುವ ಬೌಲರ್ಗಳ ದಂಡೇ ಅವಕಾಶಗಳಿಗೆ ಕಾಯತ್ತಿದೆ. ರಾಹುಲ್ ಚಹರ್ ಮತ್ತು ವರುಣ್ ಚಕ್ರವರ್ತಿ ಈಗಾಗಲೇ ತಂಡದಲ್ಲಿದ್ದಾರೆ. ಇವರೆಲ್ಲ ಉತ್ತಮವಾಗಿ ಬೌಲ್ ಮಾಡಿದರೆ, ವಿರಾಟ್ ಕೊಹ್ಲಿಗೆ ಹೆಚ್ಚಿನ ಆದ್ಯತೆಗಳಿರುತ್ತವೆ,’ ಎಂದು ಅಗರ್ಕರ್ ಹೇಳಿದ್ದ್ದಾರೆ.
‘ಟಿ20 ವಿಶ್ವಕಪ್ ಬಹಳ ದೂರವೇನೂ ಇಲ್ಲ. ಹಾಗಾಗಿ ಈಗಾಗಲೇ ಸೀನಿಯರ್ ಟೀಮಿನಲ್ಲಿ ಸ್ಥಾನ ಭದ್ರ ಮಾಡಿಕೊಂಡಿರುವ ಬೌಲರ್ಗಳ ಮೇಲೆ ಒತ್ತಡ ಹೇರಲು ಶ್ರೀಲಂಕಾ ಪ್ರವಾಸದಲ್ಲರುವ ಬೌಲರ್ಗಳಿಗೆ ಉತ್ತಮ ಅವಕಾಶ. ಇಲ್ಲಿ ನೀಡುವ ಉತ್ತಮ ಪ್ರದರ್ಶನಗಳು ಗಣನೆಗೆ ಬಾರದಿರುವುದಿಲ್ಲ,’ ಎಂದು ಅಗರ್ಕರ್ ಹೇಳಿದ್ದಾರೆ.
ಭಾರತ ಮತ್ತ ಶ್ರೀಲಂಕಾ ಜುಲೈ 18ರಿಂದ ಮೂರು ಒಡಿಐ ಮತ್ತು ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಸೆಣಸಲಿವೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಆರಂಭ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧ ತನ್ನ ಎರಡನೇ ಪಂದ್ಯದಲ್ಲೇ ಅವರು ಅರ್ಧ ಶತಕ ಬಾರಿಸಿ ತನ್ನ ಸಾಮರ್ಥ್ಯದ ಪರಿಚಯ ನೀಡಿದ್ದಾರೆ. ಇಶಾನ್ ಕಿಷನ್ ತನ್ನ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದರು ಎಂದು ಅಗರ್ಕರ್ ಹೇಳಿದ್ದಾರೆ.
‘ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಬಹುದಾದ ಆಟಗಾರರ ಪೈಕಿ ಸೂರ್ಯಕುಮಾರ್ ಯಾದವ್ ಮುಂಚೂಣಿಯಲ್ಲಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದರೆ ಅದು ಟೀಮಿನಲ್ಲಿ ಸ್ಥಾನವನ್ನು ಭದ್ರಪಡಿಸಲಾರದು. ಆದರೆ ಅವರು ಬಹಳ ಪ್ರತಿಭಾವಂತ ಬ್ಯಾಟ್ಸ್ಮನ್ ಆಗಿದ್ದಾರೆ. ಐಪಿಎಲ್ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಅವರು ಕ್ರಮೇಣ ಮೇಲಿನ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದಾರೆ,’ ಎಂದು ಆಹರ್ಕರ್ ಹೇಳಿದ್ದಾರೆ.
‘ಇಶಾನ್ ಕಿಷನ್ ಸಹ ಕಳೆದ ಐಪಿಎಲ್ನಲ್ಲಿ ಉತ್ತಮವಾಗಿ ಆಡಿದರು ಮತ್ತು ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದರು. ನಾನು ಈ ಇಬ್ಬರು ಆಟಗಾರರ ಹೆಸರನ್ನು ಮಾತ್ರ ಉಲ್ಲೇಖಿಸುತ್ತಿದ್ದೇನೆ, ಯಾಕೆಂದರೆ ಇನ್ನೂ ಹಲವಾರು ಪ್ರತಿಭಾವಂತರು ಭಾರತದ ಪರ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ,’ ಎಂದು ಅಗರ್ಕರ್ ಹೇಳಿದ್ದಾರೆ.
‘ತಂಡದಲ್ಲಿ ಕೇವಲ ಎರಡು-ಮೂರು ಸ್ಥಾನಗಳು ಮಾತ್ರ ಖಾಲಿ ಇವೆ ಹಾಗಾಗೇ ಅವಕಾಶಗಳಿಗೆ ಕಾಯುತ್ತಿರುವವರು ತಮ್ಮ ಪ್ರದರ್ಶನಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಐಪಿಎಲ್ನಲ್ಲೂ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಇವರಿಗೆ ಇದು ಉತ್ತಮ ಅವಕಾಶ. ಬಿಳಿ ಚೆಂಡಿನ ಪಂದ್ಯಗಳಿಗೆ ವಿಪುಲ ಅವಕಾಶಗಳಿವೆ. ಹೆಚ್ಚು ಸ್ಥಿರತೆಯನ್ನು ತೋರುವ ಆಟಗಾರರು ಸ್ಥಾನ ಗಿಟ್ಟಿಸುತ್ತಾರೆ,’ ಎಂದು ಆಗರ್ಕರ್ ಹೇಳಿದ್ದಾರೆ.
ಇದನ್ನೂ ಓದಿ: India vs England: ನಾನೆಂದಿಗೂ ಶತಕಗಳಿಗೋಸ್ಕರ ಆಡಿದವನಲ್ಲ! ನಿವೃತ್ತಿಯ ಬಳಿಕ ಅಂಕಿ- ಅಂಶ ಗಣನೆಗೆ ಬರುವುದಿಲ್ಲ: ಕಿಂಗ್ ಕೊಹ್ಲಿ