India vs England: ನಾನೆಂದಿಗೂ ಶತಕಗಳಿಗೋಸ್ಕರ ಆಡಿದವನಲ್ಲ! ನಿವೃತ್ತಿಯ ಬಳಿಕ ಅಂಕಿ- ಅಂಶ ಗಣನೆಗೆ ಬರುವುದಿಲ್ಲ: ಕಿಂಗ್ ಕೊಹ್ಲಿ
india vs england: ತಮ್ಮ ವೃತ್ತಿ ಜೀವನದಲ್ಲಿ ಗಳಿಸಿರುವ ಶತಕಗಳಿಗೋಸ್ಕರ ನಾನೆಂದೂ ಆಡಿಲ್ಲ, ತಂಡದ ಗೆಲುವಿಗೋಸ್ಕರ ಆಡಿದ್ದೇನೆ ಎಂದು ಹೇಳಿದರು.
ಪುಣೆ: ಈ ಒಂದು ವರ್ಷದೊಳಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿಷಯವೆಂದರೆ ಅದು ನಾಯಕ ವಿರಾಟ್ ಕೊಹ್ಲಿಯ ಶತಕಗಳ ಬರ. ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ, ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಕೊಹ್ಲಿ ಅವರ 71 ನೇ ಅಂತರರಾಷ್ಟ್ರೀಯ ಶತಕಕ್ಕಾಗಿ ಕಾಯುವಿಕೆಯು ಪ್ರತಿ ಪಂದ್ಯದಲ್ಲೂ ಹೆಚ್ಚುತ್ತಿದೆ. ಮಾರ್ಚ್ 26, ಶುಕ್ರವಾರ, ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ, ಕೊಹ್ಲಿ ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್ ಆಡಿದರು ಮತ್ತು ಈ ಬಾರಿ ಒಂದು ಶತಕ ಗಳಿಸುವ ಭರವಸೆ ಮೂಡಿಸಿದರು. ಆದರೆ ಅದು ಸಂಭವಿಸಲಿಲ್ಲ. ಈಗ ಕೊಹ್ಲಿಯ ಕೊನೆಯ ಶತಕಕ್ಕೆ ಒಂದೂವರೆ ವರ್ಷವಾಗಲಿದೆ. ಆದರೆ ಕೊಹ್ಲಿ ಮಾತ್ರ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಏಕೆಂದರೆ ವಿರಾಟ್ಗೆ ತಂಡದ ಗೆಲುವು ಮಾತ್ರ ಹೆಚ್ಚು ಮುಖ್ಯವಾಗಿದೆ.
ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಯಾವುದೇ ರೀತಿಯ ತೊಂದರೆಯಲ್ಲಿ ಸಿಲುಕಿಲ್ಲ ಮತ್ತು ಇಂಗ್ಲೆಂಡ್ ಬೌಲರ್‌ಗಳನ್ನು ಆರಾಮವಾಗಿ ಎದುರಿಸುತ್ತಿದ್ದರು.ಆದರೆ ಅರ್ಧಶತಕವನ್ನು ಪೂರೈಸಿದ ನಂತರ ಎರಡೂ ಬಾರಿ ವಿಕೆಟ್ ಕಳೆದುಕೊಂಡರು. ಈ ರೀತಿಯಾಗಿ, 2019 ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್ನಲ್ಲಿ ಅವರ ಕೊನೆಯ ಶತಕ ಬಂದಿತ್ತು.
ಗೆಲುವಿಗೋಸ್ಕರ ಕೊಡುಗೆ ನೀಡುವುದು ಮುಖ್ಯ ಇದುವರೆಗೆ ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಗಳಿಸಿರುವ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ ಗಳಿಸಿರುವ ಶತಕಗಳಿಗೋಸ್ಕರ ನಾನೆಂದೂ ಆಡಿಲ್ಲ, ತಂಡದ ಗೆಲುವಿಗೋಸ್ಕರ ಆಡಿದ್ದೇನೆ ಎಂದು ಹೇಳಿದರು. ಜೀವನದಲ್ಲಿ ವೈಯಕ್ತಿಕವಾಗಿ ಶತಕಗಳಿಗೋಸ್ಕರ ನಾನು ಆಡಿದವನಲ್ಲ. ಈ ಕಾರಣದಿಂದಾಗಿಯೇ ಕಡಿಮೆ ಅವಧಿಯಲ್ಲಿ ಇಷ್ಟೊಂದು ಶತಕಗಳನ್ನು ಗಳಿಸಿದ್ದೇನೆಂದು ಭಾವಿಸುತ್ತೇನೆ. ತಂಡದ ಗೆಲುವಿಗೋಸ್ಕರ ಕೊಡುಗೆ ನೀಡುವುದು ನನ್ನ ಮುಖ್ಯ ಆಶಯ ಎಂದರು. ನೀವು ಶತಕ ಗಳಿಸಿದ ಹೊರತಾಗಿಯೂ ನಿಮ್ಮ ತಂಡ ಸೋತರೆ ಇದಕ್ಕೆ ಯಾವುದೇ ಅರ್ಥವಿರುವುದಿಲ್ಲ. ಕ್ರಿಕಟ್ ವೃತ್ತಿ ಜೀವನದ ಅಂತ್ಯದ ಬಳಿಕ, ನಿಮ್ಮ ಅಂಕಿಅಂಶಗಳನ್ನು ನೋಡುವುದಕ್ಕಿಂತ ನೀವು ಯಾವ ರೀತಿ ಆಡಿದ್ದೀರಿ ಎಂಬುದನ್ನು ಸ್ಮರಿಸಿಕೊಳ್ಳುವುದು ತುಂಬಾ ಮುಖ್ಯ ಎಂದರು.
ರಾಹುಲ್-ಬೈರ್‌ಸ್ಟೋವ್ ಶತಕ ಬಾರಿಸಿದರು ಕೊಹ್ಲಿಗೆ ಶತಕ ಗಳಿಸಲು ಸಾಧ್ಯವಾಗದಿದ್ದರೂ, ಕೆ.ಎಲ್. ರಾಹುಲ್ ಈ ಕೆಲಸವನ್ನು ಮಾಡಿ ತಮ್ಮ ಐದನೇ ಶತಕವನ್ನು ಗಳಿಸಿದರು. ಭಾರತವು 336 ರನ್ ಗಳಿಸಿತು ಮತ್ತು ಇದರ ಹೊರತಾಗಿಯೂ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಹೊಡೆದುರುಳಿಸಿದರು. ಈ ಗುರಿ ಬಹಳ ಕಡಿಮೆ ಎಂದು ಸಾಬೀತಾಯಿತು. ಜೇಸನ್ ರಾಯ್ (55) ಭಾರತದ ವಿರುದ್ಧ ದಾಳಿ ಪ್ರಾರಂಭಿಸಿದರು. ನಂತರ ಜಾನಿ ಬೈರ್‌ಸ್ಟೋವ್ ಒಂದು ಶತಕ ಬಾರಿಸಿದರೆ, ಸಿಕ್ಸರ್‌ಗಳನ್ನು ಸುರಿಸಿದ ಬೆನ್ ಸ್ಟೋಕ್ಸ್ ಕೇವಲ ಒಂದು ರನ್‌ನಿಂದ ಶತಕವನ್ನು ತಪ್ಪಿಸಿಕೊಂಡರು ಮತ್ತು 99 ರನ್‌ಗಳಿಗೆ ಔಟಾದರು. 4 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ 44 ನೇ ಓವರ್‌ನಲ್ಲಿ ಜಯಗಳಿಸಿತು.
Published On - 5:37 pm, Sat, 27 March 21