
ದಕ್ಷಿಣ ಆಫ್ರಿಕಾ ಎ ಹಾಗೂ ಬಾಂಗ್ಲಾದೇಶ ಎ ತಂಡಗಳ ನಡುವೆ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ತೌಹಿದ್ ಹೃದಯ್ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅಜೇಯರಾಗಿ ಉಳಿದ ತೌಹಿದ್ ಹೃದಯ್ 350 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ವಿದೇಶಿ ನೆಲದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬಾಂಗ್ಲಾದೇಶ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದ್ದಾರೆ. ತೌಹಿದ್ ಹೃದಯ್ಗೂ ಮೊದಲು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಕಿಬುಲ್ ಹಸನ್ ಮತ್ತು ತಮೀಮ್ ಇಕ್ಬಾಲ್ ತ್ರಿಶತಕ ಬಾರಿಸಿದ್ದರು. ಆದರೆ ಇವರಿಬ್ಬರು ತಮ್ಮ ತವರು ನೆಲದಲ್ಲಿ ಈ ಸಾಧನೆ ಮಾಡಿದ್ದರು. ಆದರೆ ತೌಹಿದ್ ಹೃದಯ್ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಎ ತಂಡ 512 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿತು. ಅದಾದ ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಎ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು ಬರೋಬ್ಬರಿ 676 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತಂಡದ ಪರ ನಾಯಕ ತೌಹಿದ್ ಹೃದಯ್ 481 ಎಸೆತಗಳಲ್ಲಿ 27 ಬೌಂಡರಿ ಹಾಗೂ 10 ಸಿಕ್ಸರ್‌ಗಳ ಸಹಿತ ಅಜೇಯ 350 ರನ್ ಬಾರಿಸಿದರು.
ಆದಾಗ್ಯೂ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಗ್ರ ಬ್ಯಾಟರ್ಗಳಾದ ಮಹ್ಮದುಲ್ ಹಸನ್ ಜಾಯ್, ಪರ್ವೇಜ್ ಹೊಸೈನ್ ಎಮನ್ ಮತ್ತು ಮೊಹಮ್ಮದ್ ನೈಮ್ ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ಆ ನಂತರ ತಂಡದ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಹೊತ್ತ ನಾಯಕ ತೌಹಿದ್ ಹೃದಯ್ ವಿಕೆಟ್ ಕೀಪರ್ ಜಾಕಿರ್ ಅಲಿ ಅವರೊಂದಿಗೆ 292 ಎಸೆತಗಳಲ್ಲಿ ಐದನೇ ವಿಕೆಟ್‌ಗೆ 151 ರನ್‌ಗಳ ಜೊತೆಯಾಟ ನಡೆಸಿದರು. ಇತ್ತ ಜಾಕಿರ್ ಅಲಿ ಶತಕ ವಂಚಿತರಾಗಿ 94 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ತೌಹಿದ್ ಹೃದಯ್, ಮೊಹಮ್ಮದ್ ಸೈಫುದ್ದೀನ್ ಅವರೊಂದಿಗೆ ಆರನೇ ವಿಕೆಟ್‌ಗೆ 185 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮೊಹಮ್ಮದ್ ಸೈಫುದ್ದೀನ್ ಕೂಡ 87 ರನ್ಗಳಿಗೆ ಔಟಾಗುವ ಮೂಲಕ ಶತಕದಿಂದ ವಂಚಿತರಾದರು. ಕೊನೆಯಲ್ಲಿ ಮುಸ್ಫಿಕ್ ಹಸನ್ ಕೂಡ 31 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
Published On - 8:03 pm, Wed, 2 September 26