ಪಾಕಿಸ್ತಾನಕ್ಕೆ ಮುಖಭಂಗ; PSL ಪಂದ್ಯಗಳಿಗೆ ಆತಿಥ್ಯವಹಿಸದಿರಲು ದುಬೈ ನಿರ್ಧಾರ; ವರದಿ

UAE Refusal to Host PSL: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳ ಆಯೋಜನೆಗೆ ಅಡ್ಡಿಯಾಗಿದೆ. ಭಾರತದ ಡ್ರೋನ್ ದಾಳಿಯ ನಂತರ, ಯುಎಇ ಕ್ರಿಕೆಟ್ ಮಂಡಳಿಯು PSL ಪಂದ್ಯಗಳನ್ನು ಆಯೋಜಿಸಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಭಾರತ ಮತ್ತು ಪಾಕಿಸ್ತಾನದ ವಲಸಿಗರ ಸಂಖ್ಯೆ ಹೆಚ್ಚಿರುವುದರಿಂದ ಭದ್ರತಾ ಕಾರಣಗಳಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಪಾಕಿಸ್ತಾನಕ್ಕೆ ಮುಖಭಂಗ; PSL ಪಂದ್ಯಗಳಿಗೆ ಆತಿಥ್ಯವಹಿಸದಿರಲು ದುಬೈ ನಿರ್ಧಾರ; ವರದಿ
Psl 2025

Updated on: May 09, 2025 | 9:20 PM

ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಪಾಕಿಸ್ಥಾನ, ಇದೀಗ ಡ್ರೋನ್‌ ಮತ್ತು ಕ್ಷಿಪಣಿಗಳ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದೆ. ಆದರೆ ನೀಚ ಬುದ್ಧಿಯ ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಾರತೀಯ ಪಡೆಗಳು ವಿಫಲಗೊಳಿಸುತ್ತಿವೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ ಪಾಕಿಸ್ತಾನದ ಮೇಲೆ ದಾಳಿ ಮಾಡಲಾರಂಭಿಸಿದೆ. ಭಾರತದ ದಾಳಿಗೆ ಹೆದರಿರುವ ಪಾಕಿಸ್ತಾನ ಕ್ರಿಕೆಟ್  ಮಂಡಳಿಯು (PCB) ಪಾಕ್ ಸೂಪರ್ ಲೀಗ್ (PSL) ಅನ್ನು ಅರ್ಧಕ್ಕೆ ನಿಲ್ಲಿಸಿತ್ತು. ಇದಾದ ಬಳಿಕ ಈ ಲೀಗ್​ನ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸುವುದಾಗಿ ಪಿಸಿಬಿ ಘೋಷಿಸಿತ್ತು. ಆದರೀಗ ಪಿಎಸ್ಎಲ್​ನ ಉಳಿದ ಪಂದ್ಯಗಳನ್ನು ತನ್ನ ನೆಲದಲ್ಲಿ ಆಯೋಜಿಸಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಸಿದ್ಧವಿಲ್ಲ ಎಂದು ವರದಿಯಾಗಿದೆ.

ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದೆ. ಇದಾದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಮೇ 8 ರ ಗುರುವಾರ ಪಾಕಿಸ್ತಾನಿ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ಲಾಹೋರ್ ರಾವಲ್ಪಿಂಡಿ ಸೇರಿದಂತೆ ಹಲವಾರು ನಗರಗಳ ಮೇಲೆ ಡ್ರೋನ್‌ ದಾಳಿ ಮಾಡಿತ್ತು. ಅವುಗಳಲ್ಲಿ ಒಂದು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ಮೇಲೂ ಬಿದ್ದಿತು. ಗುರುವಾರವೇ ಆ ಕ್ರೀಡಾಂಗಣದಲ್ಲಿ ಪಿಎಸ್‌ಎಲ್ ಪಂದ್ಯ ನಡೆಯಬೇಕಿತ್ತು, ಆದರೆ ಡ್ರೋನ್‌ ದಾಳಿಯ ಬಳಿಕ ಪಂದ್ಯವನ್ನು ರದ್ದುಗೊಳಿಸಬೇಕಾಯಿತು.

ಯುಎಇ ನಿರಾಕರಿಸುವ ಸಾಧ್ಯತೆ

ಆ ಬಳಿಕ ಇಡೀ ಪಂದ್ಯಾವಳಿಯನ್ನು ಸ್ಥಗಿತಗೊಳಿಸಿದ್ದ ಪಿಸಿಬಿ ತಡರಾತ್ರಿ, ಉಳಿದ 8 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗುವುದು ಎಂದು ಘೋಷಿಸಿತ್ತು. ಆದರೆ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಯುಎಇ ಕ್ರಿಕೆಟ್ ಮಂಡಳಿಯು ತನ್ನ ದೇಶದಲ್ಲಿ ಪಿಎಸ್ಎಲ್ ಪಂದ್ಯಗಳನ್ನು ಆಯೋಜಿಸಲು ಸಿದ್ಧವಿಲ್ಲ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ನಿರಾಕರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಭಾರತ ಮತ್ತು ಪಾಕಿಸ್ತಾನದ ಅನೇಕ ವಲಸಿಗರು ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಅಂತಹ ಸಮಯದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸುವುದರಿಂದ ಭದ್ರತಾ ಅಪಾಯವನ್ನು ಹೆಚ್ಚಿಸುವುದಲ್ಲದೆ, ಎರಡೂ ದೇಶಗಳ ಜನರ ನಡುವೆ ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಇಸಿಬಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

2025 ರ ಐಪಿಎಲ್ ರದ್ದಾದರೂ ಬಿಸಿಸಿಐ, ಫ್ರಾಂಚೈಸಿಗಳಿಗೆ ಯಾವ ನಷ್ಟವೂ ಆಗುವುದಿಲ್ಲ..! ಕಾರಣವೇನು ಗೊತ್ತಾ?

ಬಿಸಿಸಿಐ ಜೊತೆ ಉತ್ತಮ ಸಂಬಂಧ

ಎಮಿರೇಟ್ಸ್ ಕ್ರಿಕೆಟ್ ಮಂಡಳಿ, ಬಿಸಿಸಿಐ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಟಿ20 ವಿಶ್ವಕಪ್, ಏಷ್ಯಾಕಪ್ ಮತ್ತು ಐಪಿಎಲ್‌ನ ಕೆಲವು ಸೀಸನ್​ಗಳನ್ನು ಯುಎಇಯಲ್ಲಿ ಆಯೋಜಿಸಿದೆ. ಇಷ್ಟೇ ಅಲ್ಲ, ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ತಿರಸ್ಕರಬಹುದು ಎಂದು ವರದಿ ಹೇಳಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 pm, Fri, 9 May 25