
ಭಾರತ ಅಂಡರ್-19 ತಂಡದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಇಂಗ್ಲೆಂಡ್ ವಿರುದ್ಧದ ಐದನೇ ಪಂದ್ಯದಲ್ಲಿ ರನ್ ಗಳಿಸುವಲ್ಲಿ ಎಡವಿದ್ದಾರೆ. ಇಡೀ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ವೈಭವ್ ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ವೈಭವ್ ಅವರ ಇನ್ನಿಂಗ್ಸ್ ಕೇವಲ 42 ಎಸೆತಗಳಲ್ಲಿ ಕೊನೆಗೊಂಡಿತು. ವಾಸ್ತವವಾಗಿ ಕಳೆದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದ ಬಳಿಕ ಮಾತನಾಡಿದ್ದ ವೈಭವ್, ಮುಂದಿನ ಪಂದ್ಯದಲ್ಲಿ ಪೂರ್ಣ 50 ಓವರ್‌ಗಳನ್ನು ಆಡಲು ಪ್ರಯತ್ನಿಸುವುದಾಗಿಯೂ ಮತ್ತು 200 ರನ್ ಬಾರಿಸುವುದಕ್ಕೆ ಪ್ರಯತ್ನಿಸುವುದಾಗಿಯೂ ಹೇಳಿದ್ದರು. ಆದರೆ ಈ ಪಂದ್ಯದಲ್ಲಿ ವೈಭವ್ 33 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಎಂದಿನಂತೆ ವೈಭವ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಆರಂಭದಲ್ಲೇ ತಂಡ ಪ್ರಮುಖ 2 ವಿಕೆಟ್ಗಳನ್ನು ಬಹುಬೇಗನೇ ಕಳೆದುಕೊಂಡಿತು. ಹೀಗಾಗಿ ವೈಭವ್ ಎಂದಿನಂತೆ ಮುಕ್ತವಾಗಿ ಬ್ಯಾಟ್ ಬೀಸದೆ ತಾಳ್ಮೆಯ ಆಟಕ್ಕೆ ಮುಂದಾದರು. ಇದನ್ನು ಗಮನಿಸಿದವರು, ವೈಭವ್ ಈ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಭಾರತದ ಇನ್ನಿಂಗ್ಸ್‌ನ 15 ನೇ ಓವರ್‌ನಲ್ಲಿ ವೈಭವ್ ದೊಡ್ಡ ಶಾಟ್ ಆಡಲು ಪ್ರಯತ್ನಿಸಿ ಕ್ಯಾಚಿತ್ತು ಔಟಾದರು. ಈ ಪಂದ್ಯದಲ್ಲಿ ವೈಭವ್ 42 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಕೇವಲ 33 ರನ್ ಬಾರಿಸಿ ಔಟಾದರು.
ಮೇಲೆ ಹೇಳಿದಂತೆ ನಾಲ್ಕನೇ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದ ನಂತರ, ವೈಭವ್ ಸೂರ್ಯವಂಶಿ ಸಂದರ್ಶನವೊಂದರಲ್ಲಿ ಕೊನೆಯ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂದರ್ಶನದಲ್ಲಿ, ಪೂರ್ಣ 50 ಓವರ್‌ಗಳನ್ನು ಆಡಲು ಪ್ರಯತ್ನಿಸುವುದಾಗಿ ಹೇಳಿದ್ದ ವೈಭವ್, ನಾನು 50 ಓವರ್‌ಗಳನ್ನು ಆಡಿದರೆ ಗರಿಷ್ಠ ರನ್ ಗಳಿಸಲು ಸಾಧ್ಯವಾಗುತ್ತದೆ, ಇದರಿಂದ ದ್ವಿಶತಕವನ್ನೂ ಬಾರಿಸಬಹುದು ಎಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.
IND vs ENG: ಮುಂದಿನ ಪಂದ್ಯದಲ್ಲಿ 200 ರನ್ ಹೊಡಿತೀನಿ; ವೈಭವ್ ಸೂರ್ಯವಂಶಿ ಶಪಥ
2025 ರ ಐಪಿಎಲ್ನಲ್ಲಿ ಬಿರುಗಾಳಿಯ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಸಿಡಿಲಬ್ಬರದ ಶತಕ ಬಾರಿಸಿದ್ದರು. ಅವರು ಕೇವಲ 78 ಎಸೆತಗಳಲ್ಲಿ 13 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 143 ರನ್ ಗಳಿಸಿದರು. ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ, ಟೀಂ ಇಂಡಿಯಾ 55 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದಲ್ಲದೆ ಸರಣಿಯನ್ನು ವಶಪಡಿಸಿಕೊಂಡಿತ್ತು. ವೈಭವ್ ಈ ಸರಣಿಯಲ್ಲಿ ಇದುವರೆಗೆ 29 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಸರಣಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕದ ಸಹಾಯದಿಂದ 355 ರನ್ ಕಲೆಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ