ಕೆಕೆಆರ್ ತಂಡದ 23.75 ಕೋಟಿ ಮೌಲ್ಯದ ಆಟಗಾರನಿಗೆ ಇಂಜುರಿ

Venkatesh Iyer injury: ಕಳೆದ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ರಮುಖ ಆಟಗಾರನಾಗಿದ್ದ ವೆಂಕಟೇಶ್ ಅಯ್ಯರ್ ಅವರು ರಣಜಿ ಟ್ರೋಫಿ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಇದು ಐಪಿಎಲ್ 2025 ರ ಮುನ್ನ ಕೆಕೆಆರ್‌ಗೆ ದೊಡ್ಡ ಹಿನ್ನಡೆಯಾಗಿದೆ. ಅವರ ಗಾಯದ ತೀವ್ರತೆ ಇನ್ನೂ ತಿಳಿದುಬಂದಿಲ್ಲ, ಆದರೆ ಇದು ಅವರ ಐಪಿಎಲ್ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರಬಹುದು.

ಕೆಕೆಆರ್ ತಂಡದ 23.75 ಕೋಟಿ ಮೌಲ್ಯದ ಆಟಗಾರನಿಗೆ ಇಂಜುರಿ
ವೆಂಕಟೇಶ್ ಅಯ್ಯರ್
Follow us
ಪೃಥ್ವಿಶಂಕರ
|

Updated on:Jan 23, 2025 | 6:22 PM

ಐಪಿಎಲ್​ನ 18ನೇ ಸೀಸನ್ ಪ್ರಾರಂಭವಾಗಲು 60 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಪಂದ್ಯಾವಳಿಯು ಪ್ರಾರಂಭಕ್ಕೂ ಮೊದಲು ಕಳೆದ ಬಾರಿಯ ಚಾಂಪಿಯನ್ ಕೆಕೆಆರ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಅತ್ಯಂತ ದುಬಾರಿ ಆಟಗಾರ ಗಾಯಗೊಂಡಿದ್ದು, ಮೈದಾನದಿಂದ ಹೊರನಡೆದಿದ್ದಾರೆ. ಈ ಆಟಗಾರ ಬೇರ್ಯಾರು ಅಲ್ಲ. ಕಳೆದ ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್. ಪ್ರಸ್ತುತ ರಣಜಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿರುವ ವೆಂಕಟೇಶ್ ಅಯ್ಯರ್, ಕೇರಳ ವಿರುದ್ಧದ ಪಂದ್ಯದಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರನಡೆದಿದ್ದಾರೆ.

ಮೇಲೆ ಹೇಳಿದಂತೆ ಕಳೆದ ಸೀಸನ್​ನಲ್ಲಿ ಕೋಲ್ಕತ್ತಾವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಅವರಿಂದಲೂ ಫ್ರಾಂಚೈಸ್ ಈ ಸೀಸನ್​ನಲ್ಲಿಯೂ ಹೆಚ್ಚಿನ ಭರವಸೆಯನ್ನು ಹೊಂದಿದೆ. ಆದರೆ ಪಂದ್ಯಾವಳಿಯ ಆರಂಭಕ್ಕೂ ಮುನ್ನವೇ ಅವರು ಇಂಜುರಿಯಾಗಿರುವ ಸುದ್ದಿ ಕೆಕೆಆರ್ ಫ್ರಾಂಚೈಸಿಗೆ ಆಘಾತ ತಂದಿದೆ. ರಣಜಿ ಟ್ರೋಫಿ ಪಂದ್ಯದ ವೇಳೆ ವೆಂಕಟೇಶ್ ಕಾಲಿಗೆ ಗಾಯವಾಗಿದ್ದು ಮೈದಾನದಿಂದ ಹೊರನಡೆದಿದ್ದಾರೆ. ಇದು ಮಧ್ಯಪ್ರದೇಶದ ಜೊತೆಗೆ ಕೋಲ್ಕತ್ತಾ ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿದೆ.

ಬ್ಯಾಟಿಂಗ್ ಮಾಡುವಾಗ ಗಾಯ

ರಣಜಿ ಟ್ರೋಫಿಯ ಎರಡನೇ ಹಂತದ ಗುಂಪು ಪಂದ್ಯಗಳು ಜನವರಿ 23 ಗುರುವಾರದಿಂದ ಆರಂಭಗೊಂಡಿದ್ದು, ಇದರಲ್ಲಿ ಮಧ್ಯಪ್ರದೇಶ ಮತ್ತು ಕೇರಳ ನಡುವಿನ ಪಂದ್ಯವೂ ಆರಂಭವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಪಿ ತಂಡದ 4 ವಿಕೆಟ್​ಗಳು ಬೇಗನೆ ಪತನಗೊಂಡವು. ಆ ಬಳಿಕ ವೆಂಕಟೇಶ್ ಕ್ರೀಸ್​ಗೆ ಬಂದರು. ಹಠಾತ್ತನೆ ಅವರ ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಅವರು ಸ್ವಲ್ಪ ಸಮಯ ಮಾತ್ರ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ಆ ಬಳಿಕ ಅವರು ಮೈದಾನದಿಂದ ಹೊರಹೋಗಬೇಕಾಯಿತು. ಆದರೆ, ತಂಡದ ಇನ್ನು 3 ವಿಕೆಟ್‌ಗಳು ಕ್ಷಿಪ್ರವಾಗಿ ಪತನಗೊಂಡಾಗ ವೆಂಕಟೇಶ್ ಗಾಯದ ನಡುವೆಯೂ ಕ್ರೀಸ್‌ನಲ್ಲಿ ಹೆಜ್ಜೆ ಹಾಕಲು ನಿರ್ಧರಿಸಿ ತಮ್ಮ ಹೋರಾಟದ ಶೈಲಿಯಿಂದ ಎಲ್ಲರ ಮನ ಗೆದ್ದರು.

ಔಟಾಗುವ ಮುನ್ನ, ವೆಂಕಟೇಶ್ ಅಯ್ಯರ್ 42 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇದರ ಆಧಾರದ ಮೇಲೆ ಎಂಪಿ ತಂಡವು 160 ಸ್ಕೋರ್ ತಲುಪುವಲ್ಲಿ ಯಶಸ್ವಿಯಾಯಿತು. ಸದ್ಯಕ್ಕೆ ಅವರ ಗಾಯ ಎಷ್ಟು ಗಂಭೀರವಾಗಿದೆ ಮತ್ತು ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ಹೆಚ್ಚು ಗಂಭೀರವಾದರೆ ಕೋಲ್ಕತ್ತಾ ತನ್ನ ಸ್ಟಾರ್ ಆಟಗಾರನಿಲ್ಲದೆ ಮುಂದಿನ ಐಪಿಎಲ್ ಸೀಸನ್​ ಅನ್ನು ಪ್ರಾರಂಭಿಸಬೇಕಾಗಬಹುದು.

ಕೆಕೆಆರ್ ಐಪಿಎಲ್ ಚಾಂಪಿಯನ್

ಕಳೆದ ಋತುವಿನಲ್ಲಿ ಕೋಲ್ಕತ್ತಾ ಚಾಂಪಿಯನ್ ಆಗುವಲ್ಲಿ ವೆಂಕಟೇಶ್ ಪಾತ್ರ ದೊಡ್ಡದಿತ್ತು. ಅವರು ಕ್ವಾಲಿಫೈಯರ್ 1 ಮತ್ತು ಫೈನಲ್‌ನಲ್ಲಿ ತ್ವರಿತ ಅರ್ಧ ಶತಕಗಳನ್ನು ಸಿಡಿಸಿದ್ದರು. ಇಡೀ ಋತುವಿನಲ್ಲಿ, ಈ ಬ್ಯಾಟ್ಸ್‌ಮನ್ 158 ಸ್ಟ್ರೈಕ್ ರೇಟ್‌ನಲ್ಲಿ 370 ರನ್ ಗಳಿಸಿದ್ದರು. ಈ ಪ್ರದರ್ಶನ ಕಂಡ ಕೋಲ್ಕತ್ತಾ ಅವರಿಗೆ ಬೊಕ್ಕಸ ತೆರೆದು ಮೆಗಾ ಹರಾಜಿನಲ್ಲಿ 23.75 ಕೋಟಿ ರೂ. ನೀಡಿ ಖರೀದಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Thu, 23 January 25