ಅಣ್ತಮ್ಮನ ಸಿಡಿಲಬ್ಬರ… ದಾಖಲೆಯ ಮೊತ್ತ ಪೇರಿಸಿದ ಮುಂಬೈ
Vijay Hazare Trophy Elite 2025-26: ವಿಜಯ ಹಝಾರೆ ಟೂರ್ನಿಯಲ್ಲಿ ಸರ್ಫರಾಝ್ ಖಾನ್ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ. ಮುಂಬೈ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 14 ಭರ್ಜರಿ ಸಿಕ್ಸರ್ಗಳೊಂದಿಗೆ 157 ರನ್ ಚಚ್ಚಿದ್ದಾರೆ. ಈ ಶತಕದೊಂದಿಗೆ ಮುಂಬೈ ತಂಡವು ಗೋವಾ ವಿರುದ್ಧ ದಾಖಲೆಯ ಮೊತ್ತ ಪೇರಿಸಿದೆ.

ವಿಜಯ ಹಝಾರೆ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಮುಂಬೈ ತಂಡದ ಸರ್ಫರಾಝ್ ಖಾನ್ ಹಾಗೂ ಮುಶೀರ್ ಖಾನ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಜೈಪುರದ ಜೈಪುರಿಯ ವಿದ್ಯಾಲಯ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗೋವಾ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಗೋವಾ ತಂಡದ ನಾಯಕ ದೀಪ್ರಾಜ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ (46) ಉತ್ತಮ ಆರಂಭ ಒದಗಿಸಿದ್ದರು. ಜೈಸ್ವಾಲ್ ತಂಡಕ್ಕೆ ಆಸರೆಯಾಗಿ ನಿಂತ ಮುಶೀರ್ ಖಾನ್ 66 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 60 ರನ್ ಬಾರಿಸಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಗೋವಾ ಬೌಲರ್ಗಳ ಬೆಂಡೆತ್ತಿದ ಸರ್ಫರಾಝ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿದರು. ಈ ಮೂಲಕ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು.
ಶತಕದ ಬಳಿಕ ಕೂಡ ಸಿಡಿಲಬ್ಬರದ ಮುಂದುವರೆಸಿದ ಸರ್ಫರಾಝ್ ಖಾನ್ 14 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಕೇವಲ 75 ಎಸೆತಗಳಲ್ಲಿ 157 ರನ್ ಚಚ್ಚಿದರು.
ಇತ್ತ ಸರ್ಫರಾಝ್-ಮುಶೀರ್ ಖಾನ್ ಸಹೋದರರ ಜುಗಲ್ಬಂಧಿಯೊಂದಿಗೆ 40 ಓವರ್ಗಳಲ್ಲೇ ಮುಂಬೈ ತಂಡದ ಸ್ಕೋರ್ 300ರ ಗಡಿದಾಟಿತು. ಆ ಬಳಿಕ ಬಂದ ನಾಯಕ ಶಾರ್ದೂಲ್ ಠಾಕೂರ್ 8 ಎಸೆತಗಳಲ್ಲಿ 27 ರನ್ ಚಚ್ಚಿದರು.
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಹಾರ್ದಿಕ್ ತಮೋರೆ 28 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 53 ರನ್ ಬಾರಿಸಿದರು. ಈ ಮೂಲಕ ಮುಂಬೈ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 444 ರನ್ ಕಲೆಹಾಕಿದೆ. ಇದು ವಿಜಯ ಹಝಾರೆ ಟೂರ್ನಿಯಲ್ಲಿ ದಾಖಲಾದ ನಾಲ್ಕನೇ ಗರಿಷ್ಠ ಸ್ಕೋರ್ ಎಂಬುದು ವಿಶೇಷ.
ಮುಂಬೈ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಅಂಗ್ಕ್ರಿಶ್ ರಘುವಂಶಿ, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಸರ್ಫರಾಝ್ ಖಾನ್, ಹಾರ್ದಿಕ್ ತಮೋರೆ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಶಾರ್ದೂಲ್ ಠಾಕೂರ್ (ನಾಯಕ), ತನುಷ್ ಕೋಟ್ಯಾನ್, ಸಿಲ್ವೆಸ್ಟರ್ ಡಿಸೋಝ, ತುಷಾರ್ ದೇಶಪಾಂಡೆ.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ 3 ತಂಡಗಳು ಪ್ರಕಟ
ಗೋವಾ (ಪ್ಲೇಯಿಂಗ್ XI): ಸ್ನೇಹಲ್ ಕೌತಾಂಕರ್, ಕಶ್ಯಪ್ ಬಖಾಲೆ, ಅಭಿನವ್ ತೇಜ್ರಾನಾ, ಸುಯಶ್ ಪ್ರಭುದೇಸಾಯಿ, ಲಲಿತ್ ಯಾದವ್, ದರ್ಶನ್ ಮಿಸಾಲ್, ದೀಪರಾಜ್ ಗಾಂವ್ಕರ್ (ನಾಯಕ), ರಾಜಶೇಖರ್ ಹರಿಕಾಂತ್ (ವಿಕೆಟ್ ಕೀಪರ್), ಅರ್ಜುನ್ ತೆಂಡೂಲ್ಕರ್, ಶುಭಂ ತಾರಿ, ವಾಸುಕಿ ಕೌಶಿಕ್.
