IPL 2023: ಐಪಿಎಲ್ 2023ಕ್ಕೆ ವೀಕ್ಷಕ ವಿವರಣೆಗಾರರನ್ನು ಪ್ರಕಟಿಸಿದ ವಯಾಕಾಮ್ 18: ಯಾರಿಗೆಲ್ಲ ಸ್ಥಾನವಿದೆ ನೋಡಿ
ಎರಡು ತಿಂಗಳ ಕಾಲ ನಡೆಯುವ ಐಪಿಎಲ್ 2023 ಸಮರದ ಮನರಂಜನೆ ವಯಾಕಾಮ್ 18 ಮತ್ತು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಲಿದೆ. ಇದೀಗ ವೀಕ್ಷಕ ವಿವರಣೆ ಹಾಗೂ ಪಂದ್ಯದ ಬಗ್ಗೆ ಮಾತನಾಡಲು ದೊಡ್ಡ ಹಾಗೂ ಅನುಭವಿ ತಜ್ಞರ ಸಮಿತಿಯನ್ನು ವಯಾಕಾಮ್ 18 ಪ್ರಕಟಿಸಿದೆ.

ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಚಾಲನೆ ಸಿಗಲು ಕೇವಲ ಒಂದು ದಿನವಷ್ಟೇ ಬಾಕಿಯಿದೆ. ಮಾರ್ಚ್ 31 ಶುಕ್ರವಾರ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (GT vs CSK) ತಂಡವನ್ನು ಎದುರಿಸಲಿದೆ. ಈಗಾಗಲೇ ಬಹುತೇಕ ಎಲ್ಲ ಆಟಗಾರರು ಕ್ಯಾಂಪ್ ಸೇರಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಐಪಿಎಲ್ 2023ರ (IPL 2023) ಡಿಜಿಟಲ್ ಪ್ರಸಾರಕರಾದ ಹಕ್ಕನ್ನು ವಯಾಕಾಮ್ 18 ಪಡೆದುಕೊಂಡಿದೆ. ಎರಡು ತಿಂಗಳ ಕಾಲ ನಡೆಯುವ ಈ ಚುಟುಕು ಸಮರದ ಮನರಂಜನೆ ವಯಾಕಾಮ್ 18 (Viacom18) ಮತ್ತು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಲಿದೆ. ಇದೀಗ ವೀಕ್ಷಕ ವಿವರಣೆ ಹಾಗೂ ಪಂದ್ಯದ ಬಗ್ಗೆ ಮಾತನಾಡಲು ದೊಡ್ಡ ಹಾಗೂ ಅನುಭವಿ ತಜ್ಞರ ಸಮಿತಿಯನ್ನು ವಯಾಕಾಮ್ 18 ಪ್ರಕಟಿಸಿದೆ.
ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಡುವಿನ ಜಂಟಿ ಉದ್ಯಮವಾಗಿರುವ ವಯೋಕಾಮ್18 ಮೀಡಿಯಾ ಪ್ರೈ. ಕಳೆದ ವರ್ಷದ ಹರಾಜಿನಲ್ಲಿ ಭಾರತದ ಉಪಖಂಡದಲ್ಲಿನ ಡಿಜಿಟಲ್ ಐಪಿಎಲ್ ಪ್ರಸಾರದ ಹಕ್ಕುಗಳನ್ನು 20,500 ಕೋಟಿ ರೂ.ಗೆ ಪಡೆದುಕೊಂಡಿತ್ತು. ಸದ್ಯ ಟೂರ್ನಿ ಆರಂಭಕ್ಕೆ ಒಂದು ದಿನ ಇರುವಾಗ ವಯಾಕಾಮ್ 18 ಸ್ಟಾರ್ ವಿವರಣೆಗಾರರ ದೊಡ್ಡ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಸುರೇಶ್ ರೈನಾ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಅನಿಲ್ ಕುಂಬ್ಳೆ, ಇಯಾನ್ ಮಾರ್ಗನ್, ರಾಬಿನ್ ಉತ್ತಪ್ಪ, ಆರ್‌ಪಿ ಸಿಂಗ್, ಪಾರ್ಥಿವ್ ಪಟೇಲ್ ಮತ್ತು ಸ್ಕಾಟ್ ಸ್ಟೈರಿಸ್ ಅವರನ್ನು ಒಳಗೊಂಡ ಐಪಿಎಲ್‌ನ ಪ್ಯಾನೆಲ್ ಇರಲಿದೆ.
IPL 2023: ಕಣದಲ್ಲಿ ಮೂವರು ಭಾರತೀಯರು: ಇಲ್ಲಿದೆ 10 ತಂಡಗಳ ಕೋಚ್ಗಳ ಪಟ್ಟಿ
ಇವರೊಂದಿಗೆ ಜಹೀರ್ ಖಾನ್, ಬ್ರೆಟ್ ಲೀ, ಗ್ರೇಮ್ ಸ್ಮಿತ್, ಗ್ರೇಮ್ ಸ್ವಾನ್ ಸೇರಿದಂತೆ ಸೂಪರ್‌ಸ್ಟಾರ್‌ಗಳು ಸಹ ಕೆಲ ಪಂದ್ಯಕ್ಕೆ ಸೇರಿಕೊಳ್ಳಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ್ನು 12 ಭಾಷೆಗಳಲ್ಲಿ ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಪಂಜಾಬಿ, ಒರಿಯಾ, ಬೆಂಗಾಲಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಪ್ರಸಾರ ಮಾಡಲಿದೆ. ಆರ್‌ಪಿ ಸಿಂಗ್ ಹಿಂದಿ, ಜೂಲನ್ ಗೋಸ್ವಾಮಿ ಬಂಗಾಳಿ, ಕೇದಾರ್ ಜಾಧವ್ ಮರಾಠಿ, ದೇಬಾಶಿಸ್ ಮೊಹಂತಿ ಒರಿಯಾ, ವೆಂಕಟೇಶ್ ಪ್ರಸಾದ್ ಕನ್ನಡ, ಸರನ್‌ದೀಪ್ ಸಿಂಗ್ ಪಂಜಾಬಿ, ಮನ್‌ಪ್ರೀತ್ ಜುನೇಜಾ ಗುಜರಾತಿ, ಬೇಬಿ ಮಲಯಾಳಂ, ಹನುಮ ವಿಹಾರಿ ತೆಲುಗು, ಅಭಿನವ್ ಮುಕುಂದ್ ತಮಿಳು ಮತ್ತು ಮೊಹಮ್ಮದ್ ಸೈಫ್ ಭೋಜ್‌ಪುರಿ ಭಾಷೆಗಳಲ್ಲಿ ವಿವರಣೆ ನೀಡಲಿದ್ದಾರೆ.
ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಸ್ಟಾರ್ಗಳ ಮೆರುಗು:
ಬರೋಬ್ಬರಿ 4 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ನಿಯಮ ಇದ್ದ ಕಾರಣ ಓಪನಿಂಗ್ ಸೆರೆಮನಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರೆ. ರಶ್ಮಿಕಾ ಜೊತೆಗೆ ಬಾಲಿವುಡ್ ಹಿರಿಯ ನಟಿ ಕತ್ರಿನಾ ಕೈಫ್, ತಮನ್ನಾ ಭಾಟಿಯ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಕೂಡ ಪ್ರದರ್ಶನ ನೀಡಿದ್ದಾರೆ ಎಂಬ ವರದಿಗಳಿವೆ. ಖ್ಯಾತ ಸಿನಿತಾರೆಯರ ಜೊತೆಗೆ ಖ್ಯಾತ ಗಾಯಕ ಅರಿಜಿತ್ ಸಿಂಗ್ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




