KAR vs JHKD: ವಿಜಯ್ ಹಜಾರೆ ಟ್ರೋಫಿ ಪ್ರಿ ಕ್ವಾರ್ಟರ್ ಫೈನಲ್: ಟಾಸ್ ಗೆದ್ದ ಕರ್ನಾಟಕ: ಮಯಾಂಕ್ ಪಡೆಯ ಬಲಿಷ್ಠ ಪ್ಲೇಯಿಂಗ್ XI ಇಲ್ಲಿದೆ
Vijay Hazare Trophy 2022: ಇಂದು ಮೊದಲ ಸವಾಲವನ್ನು ಎದುರಿಸುತ್ತಿರುವ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Jazare Trophy) ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ (Karnataka Team) ಭರ್ಜರಿ ಪ್ರದರ್ಶನ ತೋರುತ್ತಿದೆ. ಗುಂಪು ಹಂತದಲ್ಲಿ ಆಡಿದ ಏಳು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತು ಉಳಿದ ಆರು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಯಿಂಟ್ ಟೇಬಲ್ನಲ್ಲಿ 24 ಅಂಕ ಪಡೆದು ಅಗ್ರಸ್ಥಾನದಲ್ಲಿದೆ. ಗ್ರೂಪ್ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಅನುಭವಿಸಿದ ಒಂದು ಸೋಲು ನೇರವಾಗಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯುವ ಅವಕಾಶಕ್ಕೆ ಅಡ್ಡಬಂತು. ಆದರೂ ರಾಜ್ಯ ತಂಡಕ್ಕೆ ಫೈನಲ್ (Final)ಗೇರುವ, ಪ್ರಶಸ್ತಿ ಜಯಿಸುವ ಅವಕಾಶವಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಕರ್ನಾಟಕ ತಂಡ ಫೈನಲ್ಗೆ ಅರ್ಹತೆ ಪಡೆಕೊಳ್ಳುತ್ತದೆ.
ಇಂದು ಮೊದಲ ಸವಾಲವನ್ನು ಎದುರಿಸುತ್ತಿರುವ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಬ್ಯಾಟಿಂಗ್ ಅರಂಭಿಸಿರುವ ಜಾರ್ಖಂಡ್ 20 ರನ್ಗೂ ಮೊದಲೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಓಪನರ್ಗಳಾದ ಅರ್ನವ್ ಸಿನ್ಹಾ ಶೂನ್ಯಕ್ಕೆ ವಿಧ್ವತ್ ಕಾವೇರಪ್ಪ ಬೌಲಿಂಗ್ನಲ್ಲಿ ಔಟಾದರೆ, ಉತ್ಕರ್ಷ್ ಸಿಂಗ್ ಕೂಡ ರೋನಿತ್ ಮೊರೆ ಬೌಲಿಂಗ್ನಲ್ಲಿ ಸೊನ್ನೆ ಸುತ್ತಿದರು.
ಕರ್ನಾಟಕ ಪ್ಲೇಯಿಂಗ್ XI: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಶರತ್ ಬಿಆರ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ರೋನಿತ್ ಮೊರೆ, ಮುರಳೀಧರ ವೆಂಕಟೇಶ್, ವಿಧ್ವತ್ ಕಾವೇರಪ್ಪ.
ಜಾರ್ಖಂಡ್ ಪ್ಲೇಯಿಂಗ್ XI: ಅರ್ನವ್ ಸಿನ್ಹಾ, ಉತ್ಕರ್ಷ್ ಸಿಂಗ್, ಶಹಬಾಜ್ ನದೀಮ್, ವಿರಾಟ್ ಸಿಂಗ್ (ನಾಯಕ), ಸೌರಭ್ ತಿವಾರಿ, ರಾಜನ್‌ದೀಪ್ ಸಿಂಗ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಅನುಕೂಲ್ ರಾಯ್, ಬಾಲ ಕೃಷ್ಣ, ರಾಹುಲ್ ಶುಕ್ಲಾ, ಆಶಿಶ್ ಕುಮಾರ್.
ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆಯಾದರೂ ಉತ್ತಮ ಆರಂಭ ಪಡೆದುಕೊಂಡಿಲ್ಲ ಎಂಬುದು ನಿಜ. ಆರಂಭಿಕ ಜೋಡಿ ಮಯಂಕ್ ಅಗರ್ವಾಲ್ ಮತ್ತು ಸಮರ್ಥ್ ಅವರ ಬ್ಯಾಟಿಂಗ್ ಲಯದಲ್ಲಿರುವ ಅಸ್ಥಿರತೆ ದೊಡ್ಡ ತಲೆನೋವಾಗಿದೆ. ಹೊಸಪ್ರತಿಭೆ ನಿಕಿನ್ ಜೋಸ್, ಅನುಭವಿ ಮನೀಷ್ ಪಾಂಡೆ, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಉತ್ತಮವಾಗಿ ಆಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೋನಿತ್ ಮೋರೆ, ಕೆ. ಗೌತಮ್, ವಿ. ಕೌಶಿಕ್ ಹಾಗೂ ವಿದ್ವತ್ ಕಾವೇರಪ್ಪ ನಿರೀಕ್ಷೆಗೆ ತಕ್ಕಂತೆ ದಾಳಿ ನಡೆಸುತ್ತಿದ್ದಾರೆ.
ಇತ್ತ ಜಾರ್ಖಂಡ್ ತಂಡವನ್ನು ವಿರಾಟ್ ಸಿಂಗ್ ಮುನ್ನಡೆಸುತ್ತಿದ್ದಾರೆ. ಗುಂಪು ಹಂತದಲ್ಲಿ ಎರಡು ಸೋಲು ಕಂಡಿರುವ ಇವರಿಗೆ ಕೂಡ ಮುಂದಿನ ಹಂತಕ್ಕೇರಲು ಗೆಲುವು ಅನಿವಾರ್ಯ. ಸೌರಭ್ ತಿವಾರಿ, ಶಹ್ವಾಜ್ ನದೀಂ, ಅನುಕುಲ್ ರಾಯ್ ಅವರಂತಹ ಅನುಭವಿ ಆಟಗಾರರು ತಂಡದಲ್ಲಿದ್ದಾರೆ.