
ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಕಿಂಗ್ ಕೊಹ್ಲಿಯ ಬ್ಯಾಟ್ ಕೊನೆಗೂ ಅಬ್ಬರಿಸಿದೆ. ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಇನ್ನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಇಬ್ಬರು ದಿಗ್ಗಜರ ದಾಖಲೆಯನ್ನು ಸಹ ಮುರಿದಿದ್ದಾರೆ. ಆಂಗ್ಲರ ವಿರುದ್ಧ ಅರ್ಧಶತಕದ ಇನ್ನಿಂಗ್ಸ್ ಆಡಿದ ವಿರಾಟ್ ಏಷ್ಯಾದಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 16 ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ ನಾಲ್ಕು ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಮತ್ತು ಏಷ್ಯಾದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಏಷ್ಯಾದಲ್ಲಿ 353 ಇನ್ನಿಂಗ್ಸ್‌ಗಳಲ್ಲಿ 16 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದರೆ, ವಿರಾಟ್ ಕೊಹ್ಲಿ ತಮ್ಮ 340ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಇಬ್ಬರ ನಂತರದ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ್ ಸಂಗಕ್ಕಾರ 360 ಇನ್ನಿಂಗ್ಸ್‌ಗಳಲ್ಲಿ ಹಾಗೂ ಮಹೇಲ ಜಯವರ್ಧನೆ 401 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ಮಾಡಿದ್ದರು.
ಇದು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಸಾವಿರ ಅಂತರರಾಷ್ಟ್ರೀಯ ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ 87ನೇ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ ವಿರಾಟ್ ಇಂಗ್ಲೆಂಡ್ ವಿರುದ್ಧ 41.23 ಸರಾಸರಿಯಲ್ಲಿ 8 ಶತಕ ಮತ್ತು 32 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ರೋಹಿತ್ ಶರ್ಮಾ ಔಟಾದ ನಂತರ ಎರಡನೇ ಓವರ್ನಲ್ಲೇ ಬ್ಯಾಟಿಂಗ್ಗೆ ಬಂದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ ಬಳಿಕ ವಿಕೆಟ್ ಒಪ್ಪಿಸಿದರು. ಈ ಮೂಲಕ 50 ಓವರ್‌ಗಳ ಸ್ವರೂಪದಲ್ಲಿ ಕೊಹ್ಲಿ 451 ದಿನಗಳ ನಂತರ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ತಮ್ಮ ಇನ್ನಿಂಗ್ಸ್‌ನಲ್ಲಿ 55 ಎಸೆತಗಳನ್ನು ಎದುರಿಸಿದ ಕೊಹ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 52 ರನ್ ಕಲೆಹಾಕಿ ಇಂಗ್ಲೆಂಡ್ನ ಸ್ಟಾರ್ ಸ್ಪಿನ್ನರ್ ಆದಿಲ್ ರಶೀದ್ಗೆ ಮತ್ತೊಮ್ಮೆ ಬಲಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ