ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa vs India) ನಡುವಣ ಟೆಸ್ಟ್ ಸರಣಿಯ ಅಂತಿಮ ನಿರ್ಣಾಯಕ ಕದನ ಮಂಗಳವಾರದಿಂದ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಶುರುವಾಗಲಿದೆ. ಈಗಾಗಲೇ ಜೋಹಾನ್ಸ್ಬರ್ಗ್ನಿಂದ ಕೇಪ್ಟೌನ್ಗೆ (Capetown) ಬಂದಿಳಿದಿರುವ ಟೀಮ್ ಇಂಡಿಯಾ (Team India) ಅಭ್ಯಾಸ ಶುರು ಮಾಡಿಕೊಂಡಿದೆ. ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಇದರೊಂದಿಗೆ ಅವರು ದಕ್ಷಿಣ ಅಫ್ರಿಕಾ ಎದುರಿನ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬೆನ್ನುನೋವು ಇದ್ದ ಕಾರಣಕ್ಕೆ ಕೊಹ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಸರಣಿಯ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಕೆ.ಎಲ್. ರಾಹುಲ್ (KL Rahul) ನಾಯಕತ್ವ ವಹಿಸಿದ್ದರು. ಇದೀಗ ಕೊಹ್ಲಿ ಚೇತರಿಸಿಕೊಂಡಿದ್ದು, ಅಭ್ಯಾಸ ನಡೆಸುತ್ತಿರುವ ಕಾರಣ ಮೂರನೇ ಟೆಸ್ಟ್ನಲ್ಲಿ (3rd Test) ಆಡುವುದು ಖಚಿತವಾಗಿದೆ.
ಜೋಹಾನ್ಸ್‌ಬರ್ಗ್‌ನಲ್ಲಿನ ಸೋಲಿನಿಂದ ಚೇತರಿಸಿಕೊಳ್ಳಲು ಮತ್ತು ಸರಣಿ ಗೆಲುವನ್ನು ಪಡೆಯುವ ಆಶಯದೊಂದಿಗೆ ಭಾರತ ತಂಡವು ಮೂರನೇ ಮತ್ತು ಅಂತಿಮ ಟೆಸ್ಟ್‌ಗಾಗಿ ತರಬೇತಿಯನ್ನು ಭಾನುವಾರ ಪ್ರಾರಂಭಿಸಿತು. ನಾವು ಇಲ್ಲಿ ಸುಂದರವಾದ ಕೇಪ್ ಟೌನ್‌ನಲ್ಲಿದ್ದೇವೆ. ಟೀಮ್ ಇಂಡಿಯಾ 3ನೇ ಟೆಸ್ಟ್‌ಗೆ ತಯಾರಿಯನ್ನು ಪ್ರಾರಂಭಿಸಿದೆ ಎಂದು ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ.
ಇದಕ್ಕೂ ಮುನ್ನ ಕೇಪ್ಟೌನ್ಗೆ ಬಂದಿಳಿದ ಭಾರತಕ್ಕೆ ಊಹಿಸಲಾಗದ ರೀತಿಯಲ್ಲಿ ಅಭೂತಪೂರ್ವ ಸ್ವಾಗತಿ ಸಿಕ್ಕಿತು. ಆಫ್ರಿಕಾದವರು ತಮ್ಮದೆ ಶೈಲಿಯ ಸಂಗೀತ, ನೃತ್ಯದ ಮೂಲಕ ಭಾರತೀಯ ಆಟಗಾರರನ್ನು ವೆಲ್ಕಮ್ ಮಾಡಿದರು. ಅಲ್ಲದೆ ಕೇಪ್ಟೌನ್ಗೆ ಸ್ವಾಗತ ಎಂದು ಬರೆದಿರುವ ಕೇಕ್ ಕೂಡ ತಯಾರು ಮಾಡಿದ್ದರು.
3ನೇ ಟೆಸ್ಟ್ ಪಂದ್ಯ ನಡೆಯಲಿರುವ ಕೇಪ್ ಟೌನ್ ಭಾರತಕ್ಕೆ ಇದುವರೆಗೆ ಅದೃಷ್ಟವಾಗಿ ಪರಿಣಮಿಸಿಲ್ಲ. ಈ ಗ್ರೌಂಡ್ ನಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಸೋಲು ಕಂಡಿದೆ. ಉಳಿದ ಎರಡು ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಕಂಡಿದೆ. ಹೌದು, ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆಡಿದ ಎಲ್ಲ ಪಂದ್ಯ ಡ್ರಾ ಮತ್ತು ಸೋಲು ಕಂಡಿದೆ. ಹೀಗಾಗಿ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ಕಮ್ಬ್ಯಾಕ್ ಮಾಡಲು ತುಂಬಾನೆ ಕಷ್ಟವಿದೆ.
ಸೆಂಚೂರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್ಗಳ ಗೆಲುವು ಕಂಡಿತು. ಹೀಗಾಗಿ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಸದ್ಯ ಮೂರನೇ ಟೆಸ್ಟ್ ಪಂದ್ಯದ ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ.
ಸಾಯಿ ಪ್ರಣೀತ್ಗೆ ಕೊರೊನಾ ಪಾಸಿಟಿವ್; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ಬ್ಯಾಡ್ಮಿಂಟನ್ ಸ್ಟಾರ್