
ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ 2026ರ ನ್ಯೂಝಿಲೆಂಡ್ ಪ್ರವಾಸದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅಪರೂಪದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭರ್ಜರಿ ಆರಂಭ ಪಡೆದಿದ್ದ ಕೊಹ್ಲಿ, ನಂತರದ ಮೂರು ಇನ್ನಿಂಗ್ಸ್ಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ ದ್ವಿಪಕ್ಷೀಯ ಏಕದಿನ ಸರಣಿಯೊಂದರಲ್ಲಿ ಮೂರು ಬಾರಿ ಒಂದಂಕಿ ಮೊತ್ತಕ್ಕೆ ಔಟಾದ ಕಹಿ ದಾಖಲೆಯನ್ನು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಬರೆದಿದ್ದಾರೆ.
ಆಕ್ಲೆಂಡ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ 74 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ, ನಂತರದ ಪಂದ್ಯಗಳಲ್ಲಿ ಕಿವೀಸ್ ವೇಗಿಗಳ ಎದುರು ರನ್ ಗಳಿಸಲು ಪರದಾಡಿದರು.
ವಿರಾಟ್ ಕೊಹ್ಲಿ ಅವರಂತಹ ಸ್ಥಿರ ಪ್ರದರ್ಶನ ನೀಡುವ ಆಟಗಾರನಿಗೆ ಇಂತಹ ವೈಫಲ್ಯ ಎದುರಾಗಿರುವುದು ಇದೇ ಮೊದಲೇನಲ್ಲ. ಆದರೆ ದ್ವಿಪಕ್ಷೀಯ ಸರಣಿಯಲ್ಲಿ ಇದು 13 ವರ್ಷಗಳ ನಂತರ ಮರುಕಳಿಸಿದೆ. ಈ ಹಿಂದೆ 2012-13ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ನಡೆದ ಏಕದಿನ ಸರಣಿಯಲ್ಲಿ ಕೊಹ್ಲಿ ಮೊದಲ ಬಾರಿಗೆ ಮೂರು ಬಾರಿ ಒಂದಂಕಿ ಮೊತ್ತಕ್ಕೆ (0, 6, 7) ಔಟಾಗಿದ್ದರು.
ಇನ್ನು ಬಹುರಾಷ್ಟ್ರೀಯ ಟೂರ್ನಿಗಳನ್ನು ಪರಿಗಣಿಸಿದರೆ, 2011ರ ಏಕದಿನ ವಿಶ್ವಕಪ್ ಹಾಗೂ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲೂ ಕೊಹ್ಲಿ ತಲಾ ಮೂರು ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಮತ್ತೊಮ್ಮೆ ಒಂದೇ ಸರಣಿಯಲ್ಲಿ ಮೂರು ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ.
ನ್ಯೂಝಿಲೆಂಡ್ ನೆಲದಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿಗೂ ಈ ಸರಣಿಯ ವೈಫಲ್ಯ ದೊಡ್ಡ ಹೊಡೆತ ನೀಡಿದೆ. ಈ ಸರಣಿಗೂ ಮುನ್ನ ನ್ಯೂಝಿಲೆಂಡ್ನಲ್ಲಿ 51.53ರಷ್ಟಿದ್ದ ಅವರ ಏಕದಿನ ಬ್ಯಾಟಿಂಗ್ ಸರಾಸರಿ, ಸರಣಿಯ ಅಂತ್ಯಕ್ಕೆ 42.62ಕ್ಕೆ ಕುಸಿದಿದೆ.
ಇದನ್ನೂ ಓದಿ: ಆರ್ಯವೀರ್ ಸೆಹ್ವಾಗ್ ಬಗ್ಗೆ ವೈಭವ್ ಹಾಕಿದ ‘2 ಪದಗಳ’ ಪೋಸ್ಟ್ ವೈರಲ್!
ಒಟ್ಟಾರೆಯಾಗಿ, ಮೊದಲ ಪಂದ್ಯದ ಅದ್ಭುತ ಅರ್ಧಶತಕದ ಹೊರತಾಗಿಯೂ, ಸರಣಿಯ ಉಳಿದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟ್ ಮೌನಕ್ಕೆ ಶರಣಾಗಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಸುಮಾರು 13 ವರ್ಷಗಳ ನಂತರ ಎದುರಾದ ಈ ಅಪರೂಪದ ಬ್ಯಾಟಿಂಗ್ ವೈಫಲ್ಯವನ್ನು ಮೆಟ್ಟಿನಿಂತು, ಕಿಂಗ್ ಕೊಹ್ಲಿ ಮುಂಬರುವ ಪಂದ್ಯಗಳಲ್ಲಿ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಲಿದ್ದಾರೆ ಎಂಬುದೇ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ.