
ಟಿ20 ವಿಶ್ವಕಪ್ನಲ್ಲಿ (T20 World Cup) ರನ್‌ಗಳ ಕೋಟೆ ಕಟ್ಟುತ್ತಿರುವ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ (ICC Men’s Player of the Month award) ನಾಮನಿರ್ದೇಶನಗೊಂಡಿದ್ದಾರೆ. ಅವರೊಂದಿಗೆ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ವಿಭಾಗದಲ್ಲಿ ಭಾರತ ಮಹಿಳಾ ತಂಡದ ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ (Jemimah Rodrigues and Deepti Sharma) ಕೂಡ ನಾಮನಿರ್ದೇಶನಗೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಕೊಹ್ಲಿ ಜೊತೆಗೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಜಿಂಬಾಬ್ವೆಯ ಸಿಕಂದರ್ ರಾಜಾ ಕೂಡ ಪ್ರಶಸ್ತಿ ರೇಸ್ನಲ್ಲಿದ್ದಾರೆ.
ಮೊದಲ ಬಾರಿಗೆ ಕೊಹ್ಲಿ ನಾಮನಿರ್ದೇಶನ
ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ಕೊಹ್ಲಿ ಮೊದಲ ಬಾರಿಗೆ ನಾಮನಿರ್ದೇಶನಗೊಂಡಿದ್ದು, ಈ ಕ್ಯಾಲೆಂಡರ್ ತಿಂಗಳಿನಲ್ಲಿ 205 ರನ್ ಗಳಿಸಿರುವ ವಿರಾಟ್ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದಾರೆ. ಈ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಗೆಲುವಿನ ನಾಯಕನಾಗಿ ಹೊರಹೊಮ್ಮಿರುವ ವಿರಾಟ್, ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 53 ಎಸೆತಗಳಲ್ಲಿ ಅಜೇಯ 82 ರನ್‌ಗಳ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಕೊಹ್ಲಿಯ ಈ ಏಕಾಂಗಿ ಹೋರಾಟದ ಫಲವಾಗಿ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನವನ್ನು ಸೋಲಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿತ್ತು. ಆ ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ ಅಜೇಯ 62 ರನ್ ಗಳಿಸಿದ್ದ ವಿರಾಟ್, ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದರು. ಈ ಆಟದ ಫಲವಾಗಿ ಅವರು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಇದನ್ನೂ ಓದಿ: IND vs BAN: ಅಶ್ವಿನ್ ಮಂಕಡಿಂಗ್ ಭಯಕ್ಕೆ ಸಿಲುಕಿ ವಿಕೆಟ್ ಕೈಚೆಲ್ಲಿದ ಲಿಟನ್ ದಾಸ್! ಫೋಟೋ ನೋಡಿ
ಕೊಹ್ಲಿಯಂತೆ, ಮಿಲ್ಲರ್ ಕೂಡ ಮೊದಲ ಬಾರಿಗೆ ಪುರುಷರ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ವಿರುದ್ಧದ ದ್ವಿಪಕ್ಷೀಯ ಸರಣಿಯೊಂದಿಗೆ ತಿಂಗಳನ್ನು ಪ್ರಾರಂಭಿಸಿದ ಮಿಲ್ಲರ್, ಮೂರು ಏಕದಿನ ಪಂದ್ಯಗಳಲ್ಲಿ 117 ರನ್ ಮತ್ತು ಎರಡು ಟಿ20 ಪಂದ್ಯಗಳಲ್ಲಿ 125 ರನ್ ಬಾರಿಸಿದ್ದರು. ಅದರಲ್ಲೂ ಗುವಾಹಟಿಯಲ್ಲಿ ನಡೆದ ಟಿ20 ಪಂದ್ಯದಲ್ಲಿ 79 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿದ್ದು ಇಲ್ಲಿ ವಿಶೇಷವಾಗಿತ್ತು. ಈ ಬಿರುಸಿನ ಫಾರ್ಮ್ ಅನ್ನು ಟಿ20 ವಿಶ್ವಕಪ್‌ನಲ್ಲೂ ಮುಂದುವರೆಸಿರುವ ಮಿಲ್ಲರ್ ತಂಡದ ಪರ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
2ನೇ ಬಾರಿ ನಾಮನಿರ್ದೇಶನ
ಈ ವರ್ಷದಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಜಿಂಬಾಬ್ವೆ ಆಲ್ರೌಂಡರ್ ರಾಜಾ ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ನಾಮನಿರ್ದೇಶನಗೊಂಡಿದ್ದಾರೆ. ಇದರಲ್ಲಿ ಆಗಸ್ಟ್ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಲ್ಲದೆ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಿಂಬಾಬ್ವೆ ತಂಡವನ್ನು ಸೂಪರ್ 12 ಸುತ್ತಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ತಿಂಗಳಲ್ಲಿ ಇದುವರೆಗು ಆಡಿರುವ ಆರು ಟಿ20 ಪಂದ್ಯಗಳಲ್ಲಿ 145 ರನ್ ಗಳಿಸಿರುವ ರಾಜಾ 14.66 ರ ಸರಾಸರಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಇಬ್ಬರು ಭಾರತೀಯರು
ಇನ್ನು ಮಹಿಳೆಯರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಭಾರತದ ರಾಡ್ರಿಗಸ್ ಈ ಹಿಂದೆ ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿ ಆ ತಿಂಗಳಲ್ಲೂ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಮತ್ತೊಮ್ಮೆ ಮಹಿಳಾ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ ಆಟ ಆಡುವ ಮೂಲಕ ರಾಡ್ರಿಗಸ್ ಮಿಂಚಿದರು. ಒಟ್ಟಾರೆ ಏಷ್ಯಾಕಪ್ನಲ್ಲಿ ರಾಡ್ರಿಗಸ್ ಎಂಟು ಪಂದ್ಯಗಳಿಂದ 54.25 ರ ಸರಾಸರಿಯಲ್ಲಿ 217 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಪ್ರಮುಖ ರನ್-ಸ್ಕೋರರ್ ಆಗಿದ್ದರು. ಈ ಇಬ್ಬರೊಂದಿಗೆ ಪಾಕಿಸ್ತಾನದ ನಿದಾ ದಾರ್ ಕೂಡ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Thu, 3 November 22