Virat Kohli: ವಿರಾಟ್ ಕೊಹ್ಲಿದು ಹರಕಲು ಬಾಯಿ ಎಂದ ಮಾಜಿ ಕ್ರಿಕೆಟಿಗ
Nick Compton: ಲಾರ್ಡ್ಸ್ ಟೆಸ್ಟ್ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಇದ್ದ ಒತ್ತಡವೇ ನಮ್ಮ ತಂಡವನ್ನು ಗೆಲ್ಲಲು ಪ್ರೇರೇಪಿಸಿತು ಎಂದು ತಿಳಿಸಿದ್ದರು. ಇನ್ನು ಕೆಎಲ್ ರಾಹುಲ್ ಕೂಡ ಸ್ಲೆಡ್ಜಿಂಗ್ ಮಾಡಿದ್ರೆ ನಮ್ಮ ತಂಡ ಕೂಡ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಕ್ರಿಕೆಟ್ ಕಾಶಿ ಲಾರ್ಡ್ಸ್ (Lord’s) ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಟೀಮ್ ಇಂಡಿಯಾ (Team India) ಬಗ್ಗು ಬಡಿದು ಹೊಸ ಇತಿಹಾಸ ನಿರ್ಮಿಸಿದೆ. ಅಂತಿಮ ದಿನದಾಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ (Virat Kohli) ಪಡೆಯ ಆಟಕ್ಕೆ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ಈ ಪಂದ್ಯವನ್ನು ಭಾರತ ಗೆಲ್ಲಲು ಕ್ಯಾಪ್ಟನ್ ಕೊಹ್ಲಿಯ ಆಕ್ರಮಣಕಾರಿ ಮನೋಭಾವ ಕೂಡ ಒಂದು ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಕೊಹ್ಲಿಯ ಈ ಮನೋಭಾವವನೇ ಇದೀಗ ಇಂಗ್ಲೆಂಡ್ (England) ಕ್ರಿಕೆಟಿಗರ ಕಣ್ಣು ಕೆಂಪಾಗಿಸಿದೆ. ಹೌದು, ಅಂತಿಮ ಪಂದ್ಯದಲ್ಲಿ ಮೈದಾನದಲ್ಲಿ ಕೊಹ್ಲಿ ಹಲವು ಬಾರಿ ತಮ್ಮ ಆಕ್ರಮಣಕಾರಿ ಗುಣವನ್ನು ಪ್ರದರ್ಶಿಸಿದ್ದರು. ಏಟಿಗೆ ಎದಿರೇಟು ಎಂಬಂತೆ ಕಾಲೆಳೆದ ಇಂಗ್ಲೆಂಡ್ ಆಟಗಾರರಿಗೆ ಮೈದಾನದಲ್ಲೇ ತಕ್ಕ ಉತ್ತರ ನೀಡಿದ್ದರು. ಇದೀಗ ಈ ಕೊಹ್ಲಿ ಈ ಗುಣಗಳನ್ನು ಮಾಜಿ ಇಂಗ್ಲೆಂಡ್ ಆಟಗಾರ ನಿಕ್ ಕಾಂಪ್ಟನ್ (Nick Compton) ಟೀಕಿಸಿದ್ದಾರೆ.
ಲಾರ್ಡ್ಸ್ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಇತ್ತ ನಿಕ್ ಕಾಂಪ್ಟನ್ ಕೊಹ್ಲಿಯ ಆಕ್ರಮಣಕಾರಿ ನಾಯಕತ್ವದ ಗುಣಗಳನ್ನು ಟೀಕಿಸಿದ್ದರು. ಕೊಹ್ಲಿಯನ್ನು ಪ್ರಸ್ತುತ ಕ್ರಿಕೆಟ್ ಅಂಗಳದ ಅತ್ಯಂತ ಕೆಟ್ಟ ವ್ಯಕ್ತಿ ಎಂದಿರುವ ಕಾಂಪ್ಟನ್, ಆತನಿಂದ ನಾನು ಕೂಡ ನಿಂದನೆಗೆ ಒಳಗಾಗಿದ್ದೆ ಎಂದಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹರಕಲು ಬಾಯಿ ವ್ಯಕ್ತಿಯಲ್ಲವೇ? 2012 ರಲ್ಲಿ ನಾನು ಕೂಡ ಕೊಹ್ಲಿಯಿಂದ ನಿಂದನೆಯನ್ನು ಎದುರಿಸಿದ್ದೆ. ಅದನ್ನು ನಾನು ಎಂದಿಗೂ ಮರೆಯಲಾರೆ. ಏಕೆಂದರೆ ಆಗ ವಿರಾಟ್ ಎಲ್ಲ ಮಿತಿಗಳನ್ನು ಮೀರಿದ್ದ. ಇದು ನನ್ನನ್ನು ದಿಗ್ಭ್ರಮೆಗೊಳಿಸಿತು. ಕೊಹ್ಲಿ ನಡುವಳಿಕೆಯು ಯಾವ ಮಟ್ಟದ ನಾಯಕತ್ವ ಹೊಂದಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರ ನಡುವಳಿಕೆಯನ್ನು ನೀವು ಗಮನಿಸಬಹುದು ಎಂದು ನಿಕ್ ಕಾಂಪ್ಟನ್ ಹೇಳಿದ್ದಾರೆ.
ಇತ್ತ ಇಂಗ್ಲೆಂಡ್ ಮಾಜಿ ಆಟಗಾರನ ಈ ಹೇಳಿಕೆ ಬೆನ್ನಲ್ಲೇ ಟೀಮ್ ಇಂಡಿಯಾ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಇಂಗ್ಲೆಂಡ್ ಮಾಜಿ ಆಟಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಹ್ಲಿಯೊಂದಿಗಿನ ಹಳೆಯ ದ್ವೇಷವನ್ನು ಉಲ್ಲೇಖಿಸಿ ಕಾಂಪ್ಟನ್ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಎಂದಿದ್ದಾರೆ. ಅಲ್ಲದೆ ಭಾರತ ತಂಡದ ಆಟಗಾರರ ವಿರುದ್ಧ ಇಂಗ್ಲೆಂಡ್ ಆಟಗಾರರು ಸ್ಲೆಡ್ಜ್ ಮಾಡಿದಾಗ ನಿವೇಕೆ (ನಿಕ್ ಕಾಂಪ್ಟನ್) ಯಾಕೆ ಸುಮ್ಮನಿದ್ರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಲಾರ್ಡ್ಸ್ ಟೆಸ್ಟ್ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಇದ್ದ ಒತ್ತಡವೇ ನಮ್ಮ ತಂಡವನ್ನು ಗೆಲ್ಲಲು ಪ್ರೇರೇಪಿಸಿತು ಎಂದು ತಿಳಿಸಿದ್ದರು. ಇನ್ನು ಕೆಎಲ್ ರಾಹುಲ್ ಕೂಡ ಸ್ಲೆಡ್ಜಿಂಗ್ ಮಾಡಿದ್ರೆ ನಮ್ಮ ತಂಡ ಕೂಡ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಮ್ಮ ಆಟಗಾರರಲ್ಲಿ ಒಬ್ಬರನ್ನು ಕೆಣಕಿದರೆ, 11 ಆಟಗಾರರು ಸಹ ತಿರುಗಿ ಬೀಳ್ತೇವೆ ಎಂದು ರಾಹುಲ್ ತಿಳಿಸಿದ್ದರು. ಇದೀಗ ಟೀಮ್ ಇಂಡಿಯಾ ಆಟಗಾರರ ಈ ಮನೋಭಾವವೇ ಇಂಗ್ಲೆಂಡ್ ಆಟಗಾರರ ನಿದ್ರೆಗೆಡಿಸಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: T20 World Cup 2021: 7 ಮಂದಿ ಔಟ್: ಟಿ20 ವಿಶ್ವಕಪ್ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?
ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ
ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್ಗೆ ಅಫ್ಘಾನಿಸ್ತಾನ್ ತಂಡ ಅನುಮಾನ
(Virat Kohli Most Foul Mouthed Individual Says Nick Compton)