- Kannada News Sports Cricket news T20 World Cup 2021: Australia Announce The Squad for 2021 T20 World Cup
T20 World Cup 2021: 7 ಮಂದಿ ಔಟ್: ಟಿ20 ವಿಶ್ವಕಪ್ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
Australia Squad for 2021 T20 World Cup: ಇನ್ನು ತಂಡದಲ್ಲಿ ಸ್ಥಾನ ಪಡೆದಿರುವ ಜೋಶ್ ಇಂಗ್ಲಿಸ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಲವು ಲೀಗ್ಗಳಲ್ಲಿ 63 ಟಿ20 ಪಂದ್ಯಗಳನ್ನಾಡಿರುವ ಇಂಗ್ಲಿಸ್ ಇದುವರೆಗೆ 1645 ರನ್ ಗಳಿಸಿದ್ದಾರೆ.
Updated on: Aug 19, 2021 | 2:45 PM

ಯುಎಇ-ಒಮಾನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ (T20 World Cup 2021) ಕ್ರಿಕೆಟ್ ಆಸ್ಟ್ರೇಲಿಯಾ (CA) 15 ಸದಸ್ಯರ ತಂಡವನ್ನು (Australia Squad for 2021 T20 World Cup) ಪ್ರಕಟಿಸಿದೆ. ಇತ್ತೀಚೆಗೆ, ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಆಸೀಸ್ ನಾಯಕ ಫಿಂಚ್ ಅವರನ್ನೇ ತಂಡದ ಕ್ಯಾಪ್ಟನ್ ಆಗಿ ಮುಂದುವರೆಸಲಾಗಿದೆ. ಇನ್ನು ತಂಡದಲ್ಲಿ ಸ್ಥಾನ ಪಡೆಯುವಲ್ಲಿ 26ರ ಹರೆಯದ ಯುವ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಯಶಸ್ವಿಯಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಂಗ್ಲಿಸ್ ಬಿಗ್ ಬ್ಯಾಷ್ ಲೀಗ್ ಮತ್ತು ಟಿ20 ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಯುವ ಕ್ರಿಕೆಟಿಗನಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಟಿ20 ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಪ್ರದರ್ಶನ ಉತ್ತಮವಾಗಿಲ್ಲ. ಇದಕ್ಕೆ ಸಾಕ್ಷಿಯೇ ಇದುವರೆಗೆ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲದಿರುವುದು. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ, ಚುಟುಕು ಕ್ರಿಕೆಟ್ನಲ್ಲಿ ಆಸೀಸ್ ತಂಡ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಸೋತಿತ್ತು. ಇದೇ ವೇಳೆ ತಂಡದಲ್ಲಿದ್ದ ಜೈ ರಿಚರ್ಡ್ಸನ್, ಆಂಡ್ರ್ಯೂ ಟೈ, ಜೇಸನ್ ಬೆಹ್ರೆಂಡೋರ್ಫ್, ಅಲೆಕ್ಸ್ ಕ್ಯಾರಿ, ಮೊಯಿಸ್ ಹೆನ್ರಿಕ್ಸ್, ಜೋಸ್ ಫಿಲಿಪ್ ಮತ್ತು ಆಸ್ಟನ್ ಟರ್ನರ್ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡಲಾಗಿದೆ.

ಇನ್ನು ತಂಡದಲ್ಲಿ ಸ್ಥಾನ ಪಡೆದಿರುವ ಜೋಶ್ ಇಂಗ್ಲಿಸ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಲವು ಲೀಗ್ಗಳಲ್ಲಿ 63 ಟಿ20 ಪಂದ್ಯಗಳನ್ನಾಡಿರುವ ಇಂಗ್ಲಿಸ್ ಇದುವರೆಗೆ 1645 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 11 ಅರ್ಧ ಶತಕಗಳು ಸೇರಿವೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಬ್ಲಾಸ್ಟ್‌ನಲ್ಲಿ ಲೀಸೆಸ್ಟರ್‌ಶೈರ್ ಪರ ಇಂಗ್ಲಿಸ್ ಕೇವಲ 61 ಎಸೆತಗಳಲ್ಲಿ ಅಜೇಯ 118 ರನ್ ಬಾರಿಸಿದ್ದರು. ಅಷ್ಟೇ ಅಲ್ಲದೆ ಲೀಸೆಸ್ಟರ್‌ಶೈರ್ ಪರ 14 ಪಂದ್ಯಗಳಲ್ಲಿ 531 ರನ್ ಚಚ್ಚಿದ್ದರು. ಇದೇ ಕಾರಣದಿಂದ ಯುವ ಆರಂಭಿಕ ಆಟಗಾರರನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದೆ.

ಆಸ್ಟ್ರೇಲಿಯಾದ 15 ಸದಸ್ಯರ ತಂಡ ಹೀಗಿದೆ: ಆರೋನ್ ಫಿಂಚ್ (ನಾಯಕ), ಆಸ್ಟನ್ ಅಗರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಜೋಸ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವಿಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆಡಮ್ ಝಂಪಾ.

ಮೀಸಲು ಆಟಗಾರರು: ಡೇನಿಯಲ್ ಕ್ರಿಶ್ಚಿಯನ್, ನಾಥನ್ ಎಲ್ಲಿಸ್, ಡೇನಿಯಲ್ ಸ್ಯಾಮ್ಸ್.

ಇನ್ನು ಟಿ20 ಕ್ರಿಕೆಟ್ನ ಟಾಪ್ 8 ರ್ಯಾಂಕಿಂಗ್ ತಂಡಗಳು ಈಗಾಗಲೇ ನೇರವಾಗಿ ಸೂಪರ್ 12 ಹಂತಕ್ಕೇರಿದೆ. ಈ ತಂಡಗಳೆಂದರೆ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ. ಈ ತಂಡಗಳ ಜೊತೆ ಅರ್ಹತಾ ಸುತ್ತಿನಿಂದ 4 ತಂಡಗಳು ಸೇರ್ಪಡೆಯಾಗಲಿದ್ದು, ಆ ಬಳಿಕ ಸೂಪರ್ 12 ಪಂದ್ಯಗಳು ಶುರುವಾಗಲಿದೆ.

ಇನ್ನು ಭಾರತದ ಮೊದಲ ಪಂದ್ಯವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಜೊತೆ ಎಂಬುದು ವಿಶೇಷ. ಈ ಪಂದ್ಯವು ಅಕ್ಟೋಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.



















