
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ಅಂತ್ಯ ಹಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಅದ್ಭುತ ಬ್ಯಾಟಿಂಗ್ ಮಾಡಿ ಅರ್ಧಶತಕ ಪೂರೈಸಿದರು. ಮೊದಲ ಓವರ್‌ನಲ್ಲೇ ರೋಹಿತ್ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ಕೊಹ್ಲಿ 55 ಎಸೆತಗಳಲ್ಲಿ 52 ರನ್‌ಗಳ ಇನ್ನಿಂಗ್ಸ್ ಆಡಿದರು. ಆರಂಭಿಕ ಆಘಾತದ ನಡುವೆಯೂ ಸ್ಫೋಟಕ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅರ್ಧಶತಕ ಬಾರಿಸಿದರು. ಈ ಮೂಲಕ ಕೊಹ್ಲಿ 451 ದಿನಗಳ ನಂತರ ಏಕದಿನ ಮಾದರಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.
ಮೇಲೆ ಹೇಳಿದಂತೆ ಭಾರತದ ಇನ್ನಿಂಗ್ಸ್ನ ಎರಡನೇ ಓವರ್‌ನಲ್ಲೇ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬರಬೇಕಾಯಿತು. ಕಟಕ್ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ ಅಹಮದಾಬಾದ್‌ನಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಹೀಗಾಗಿ ಒತ್ತಡಕ್ಕೊಳಗಾದ ಕೊಹ್ಲಿ ಕೂಡ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರು. ಇದರ ಲಾಭ ಪಡೆಯಲು ಮುಂದಾದ ಮಾರ್ಕ್ ವುಡ್ ವಿರಾಟ್ ಕೊಹ್ಲಿಗೆ ತುಂಬಾ ತೊಂದರೆ ಕೊಟ್ಟರು.
ಆದರೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಕೊಹ್ಲಿ ಸೆಟ್ ಆದ ನಂತರ ಬೌಂಡರಿಗಳ ಮಳೆಗರೆಯಲು ಆರಂಭಿಸಿದರು. ಇದಲ್ಲದೆ ಶುಭ್‌ಮನ್ ಗಿಲ್ ಅವರೊಂದಿಗೆ 96 ಎಸೆತಗಳಲ್ಲಿ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರೊಂದಿಗೆ ವಿರಾಟ್ 50 ಎಸೆತಗಳಲ್ಲಿ ಅರ್ಧಶತಕ ಕೂಡ ಪೂರೈಸಿದರು.
ಅರ್ಧಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ಸೆಟ್ಟ್ಟಾದಂತೆ ಕಾಣುತ್ತಿದ್ದರು. ವಾಸ್ತವವಾಗಿ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಒಮ್ಮೆ ಕ್ರೀಸ್ನಲ್ಲಿ ಭದ್ರವಾಗಿ ಬೇರೂರಿದರೆ ಅವರ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್ ಹೊರಬರುತ್ತದೆ. ಆದರೆ ಅಹಮದಾಬಾದ್‌ನಲ್ಲಿ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಇಡೀ ಸರಣಿಯಲ್ಲಿ ಕೊಹ್ಲಿಗೆ ಕಾಟ ಕೊಟ್ಟಿದ್ದ ಆದಿಲ್ ರಶೀದ್ ಮತ್ತೊಮ್ಮೆ ಕೊಹ್ಲಿಯನ್ನು ಪೆವಿಲಿಯನ್ಗಟ್ಟಿದರು. ಈ ಮೂಲಕ ವಿರಾಟ್ ಕೊಹ್ಲಿ 10 ಪಂದ್ಯಗಳಲ್ಲಿ ಐದನೇ ಬಾರಿಗೆ ಆದಿಲ್ ರಶೀದ್‌ಗೆ ಬಲಿಯಾದ ಬೇಡದ ದಾಖಲೆಯನ್ನು ತನ್ನದಾಗಿಸಿಕೊಂಡರು.
ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪರ್ತ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ಐವತ್ತಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ್ದರು. ಆ ನಂತರ ಮುಂದಿನ 10 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಆದರೆ ಅಹಮದಾಬಾದ್‌ನಲ್ಲಿ ಈ ವೈಫಲ್ಯಕ್ಕೆ ಅಂತ್ಯ ಹಾಡಿದ ಕೊಹ್ಲಿ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಫಾರ್ಮ್ ಕಂಡುಕೊಂಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Wed, 12 February 25