ಟೀಮ್ ಇಂಡಿಯಾ ಸಂಭ್ರಮಿಸುತ್ತಿದ್ದರೆ ಫೋನ್ನಲ್ಲೇ ಮೈಮರೆತ ವಿರಾಟ್ ಕೊಹ್ಲಿ
India vs England, 3rd ODI: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ (112) ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ (52) ಹಾಗೂ ಶ್ರೇಯಸ್ ಅಯ್ಯರ್ (78) ಅರ್ಧಶತಕ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 356 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 34.2 ಓವರ್ಗಳಲ್ಲಿ 214 ರನ್ಗಳಿಸಿ ಆಲೌಟ್ ಆಗಿದೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ನಾಗ್ಪುರದಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ಕಟಕ್ನಲ್ಲಿ ಜರುಗಿದ ದ್ವಿತೀಯ ಪಂದ್ಯದಲ್ಲೂ ಇಂಗ್ಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸುವಲ್ಲಿ ಭಾರತೀಯರು ಯಶಸ್ವಿಯಾಗಿದ್ದರು. ಇನ್ನು ಅಹಮದಾಬಾದ್ನಲ್ಲಿ ನಡೆದ ಮೂರನೇ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 142 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಕೈಯಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟ್ರೋಫಿ ಸ್ವೀಕರಿಸಿದರು. ಆ ಬಳಿಕ ನಡೆದ ಫೋಟೋಶೂಟ್ ವೇಳೆ ಭಾರತೀಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು.
ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲದಂತೆ ವಿರಾಟ್ ಕೊಹ್ಲಿ ಮಾತ್ರ ಫೋನ್ನಲ್ಲೇ ಮೈಮರೆತಿದ್ದರು. ಇದೀಗ ಟೀಮ್ ಇಂಡಿಯಾ ಸಂಭ್ರಮಿಸುತ್ತಿದ್ದರೂ, ಕೊಹ್ಲಿ ಫೋನ್ನಲ್ಲಿ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಫೋನ್ ಕಾಲ್ ವಿಡಿಯೋ:
Virat Kohli on the phone call during the Trophy celebration#ViratKohli𓃵 #INDvsENG#Rcbcaptain pic.twitter.com/gO1tu5cg9s
— Zsports (@_Zsports) February 13, 2025
ಈ ಬಗ್ಗೆ ಪರ ವಿರೋಧ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿದೆ. ಕೆಲವರು ಕೊಹ್ಲಿಯನ್ನು ಫ್ಯಾಮಿಲಿ ಮ್ಯಾನ್ ಎಂದು ಹಾಡಿ ಹೊಗಳಿದರೆ, ಮತ್ತೆ ಕೆಲವರು ವಿರಾಟ್ ಕೊಹ್ಲಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫಾರ್ಮ್ಗೆ ಮರಳಿದ ಕಿಂಗ್ ಕೊಹ್ಲಿ:
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮತ್ತೆ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಕೊಹ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆತ್ಮ ವಿಶ್ವಾಸದಿಂದಲೇ ಬ್ಯಾಟ್ ಬೀಸಿದ್ದರು.
ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್
ಅಲ್ಲದೆ 55 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 52 ರನ್ ಬಾರಿಸಿ ಭಾರತ ತಂಡದ ಬೃಹತ್ ಮೊತ್ತಕ್ಕೆ ತನ್ನದೆಯಾದ ಕೊಡುಗೆ ನೀಡಿದ್ದರು. ಇದೀಗ ಫಾರ್ಮ್ಗೆ ಮರಳಿರುವ ಕಿಂಗ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ಲಯವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ.
