Venkatesh Iyer: ವೆಂಕಟೇಶ್ ಅಯ್ಯರ್ ಸ್ಫೋಟಕ ಹೊಡೆತಕ್ಕೆ ತಬ್ಬಿಬ್ಬಾದ ಭಾರತದ ಡಗೌಟ್: ಇಲ್ಲಿದೆ ರೋಚಕ ವಿಡಿಯೋ
IND vs WI T20, Viral Video: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 33 ರನ್ ಚಚ್ಚಿದ ವೆಂಕಟೇಶ್ ಅಯ್ಯರ್ ತಂಡದ ಮೊತ್ತವನ್ನು ಎರಿಸಿದರು. ಅದರಲ್ಲೂ ವೈಡ್ ಬಾಲ್ಗೆ ಬ್ಯಾಟ್ ತಾಗಿಸಿ ಫೈನ್ ಲೆಗ್ನಲ್ಲಿ ಇವರು ಬೌಂಡರಿ ಬಾರಿಸಿದ್ದಕ್ಕೆ ಭಾರತದ ಡಗೌಟ್ನಲ್ಲಿ ಏನಾಯ್ತು ನೋಡಿ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಕದನದಲ್ಲಿ ಟೀಮ್ ಇಂಡಿಯಾ (Team India) 8 ರನ್ಗಳ ರೋಚಕ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈಡನ್ ಗಾರ್ಡನ್ಸ್ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ರಿಷಭ್ ಪಂತ್ ಅವರ ಹಾಗೂ ವಿರಾಟ್ ಕೊಹ್ಲಿ ಅವರ 52 ರನ್ ಮತ್ತು ವೆಂಕಟೇಶ್ ಅಯ್ಯರ್ (Venkatesh Iyer) ಅವರ ಉಪಯುಕ್ತ ಕಾಣಿಕೆಯ ನೆರವಿನಿಂದ 5 ವಿಕೆಟ್‌ಗೆ 186 ರನ್‌ಗಳಿಸಿದರೆ, ಬಳಿಕ ಗೆಲುವಿಗಾಗಿ ವಿಂಡೀಸ್ ಕಡೇ ಹಂತದವರೆಗೂ ಹೋರಾಡಿದರೂ 3 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಅಂತಿಮ ಹಂತದ ವೇಳೆ ಭಾರತ ಪರ ಮಿಂಚಿದ್ದು ಪಂತ್ (Rishabh Pant) ಜೊತೆ ವೆಂಕಟೇಶ್ ಅಯ್ಯರ್. ಸರಣಿಯ ಮೊದಲ ಪಂದ್ಯದಲ್ಲೂ ಬಿರುಸಿನ 24* ರನ್ ಸಿಡಿಸಿದ್ದ ಅಯ್ಯರ್, ಎರಡನೇ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 33 ರನ್ ಚಚ್ಚಿ ತಂಡದ ಮೊತ್ತವನ್ನು ಎರಿಸಿದರು.
ಅಯ್ಯರ್ ಬ್ಯಾಟ್ನಿಂದ 4 ಬೌಂಡರಿ ಮತ್ತು 1 ಸಿಕ್ಸರ್ ಮೂಡಿಬಂತು. ತಮ್ಮ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಅಯ್ಯರ್ ಅಮೋಘ ಹೊಡೆತಗಳ ಮೂಲಕ ಗಮನ ಸೆಳೆದರು. ಅಯ್ಯರ್ ಸ್ಫೋಟಕ ಆಟಕ್ಕೆ ಟೀಮ್ ಇಂಡಿಯಾದ ಡಗೌಟ್ ಕೂಡ ಒಂದು ಕ್ಷಣ ತಬ್ಬಿಬ್ಬಾಯಿತು. ಹೌದು, 183.33ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ವೆಂಕಟೇಶ್ ಅಯ್ಯರ್, 16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಲೆಗ್ ಸೈಡ್ ವೈಡ್ ಬಾಲ್ಗೆ ಬ್ಯಾಟ್ ತಾಗಿಸಿ ಫೈನ್ ಲೆಗ್ನಲ್ಲಿ ಬೌಂಡರಿ ಚಚ್ಚಿದರು.
ಅತಿ ವೇಗವಾಗಿದ್ದ ಚೆಂಡು ಕ್ಷಣಾರ್ಧದಲ್ಲಿ ಫೈನ್ ಲೆಗ್ ಮೂಲಕ ಸೀದಾ ಭಾರತದ ಡಗೌಟ್ ಕಡೆಗೆ ಬಂತು. ಸೆಕೆಂಡ್ಗಳ ಸಮಯದಲ್ಲಿ ಚೆಂಡು ಬಂದಿದ್ದನ್ನು ಡಗೌಟ್ನಲ್ಲಿದ್ದ ಟೀಮ್ ಇಂಡಿಯಾ ಆಟಗಾರರು ಅರಿಯಲು ಸಾಧ್ಯವಾಗದೆ ಕೂತಲ್ಲಿಂದ ಎದ್ದು ಚೆಂಡಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಮುಂದಾದರು. ಇದನ್ನು ಕಂಡು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಒಂದು ಕ್ಷಣ ದಂಗಾಗಿ ಹೋದರು. ಇಲ್ಲಿದೆ ನೋಡಿ ಆ ವಿಡಿಯೋ.
— Addicric (@addicric) February 18, 2022
ರಿಷಭ್ ಪಂತ್ ಜೊತೆ ಭರ್ಜರಿ ಜೊತೆಯಾಟ ಆಡಿದ ವೆಂಕಟೇಶ್ ಅಯ್ಯರ್ 76 ರನ್ಗಳ ಕಾಣಿಕೆ ನೀಡಿದರು. ರೋಹಿತ್ ಶರ್ಮಾ ಪಂದ್ಯ ಮುಗಿದ ಬಳಿಕ ಅಯ್ಯರ್ ಆಟದ ಬಗ್ಗೆ ಮನಪೂರ್ವಕವಾಗಿ ಹೊಗಳಿದರು. ವೆಂಕಟೇಶ್ ಅಯ್ಯರ್ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿರುವುದು ಖುಷಿ ನೀಡುತ್ತದೆ. ಅವರ ಕೌಶಲ್ಯದಲ್ಲಿ ತುಂಬಾ ಬದಲಾವಣೆ ಆಗಿದ್ದು ಪ್ರತಿಯೊಬ್ಬ ನಾಯಕನು ಇದನ್ನೆ ಬಯಸುತ್ತಾನೆ. ಈ ರೀತಿಯ ಆಟಗಾರ ತಂಡಕ್ಕೆ ಅಗತ್ಯವಿದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಓಟವನ್ನು ಭರ್ಜರಿ ಆಗಿ ಮುಂದುವರೆಸಿದೆ. ಶುಕ್ರವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಭಾರತ 8 ರನ್ಗಳ ರೋಚಕ ಜಯ ಸಾಧಿಸಿತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಸಿಕ್ಕ 100ನೇ ಗೆಲುವು ಎಂಬುದು ವಿಶೇಷ. ಸ್ಫೋಟಕ ಬ್ಯಾಟರ್ಗಳಾದ ನಿಕೋಲಸ್ ಪೂರನ್ ಹಾಗೂ ರೊವ್ಮನ್ ಪೊವೆಲ್ ಜೋಡಿಯ ಬಿರುಸಿನ ಬ್ಯಾಟಿಂಗ್ ನಡುವೆಯೂ ಕೆರಿಬಿಯನ್ನರಿಗೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಭಾರತ ಪರ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅದರಲ್ಲೂ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಕ್ಕ ಉತ್ತರ ನೀಡಿದರು.
Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಆಟದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ
IND vs WI T20: ಮುಂದುವರೆದ ರೋಹಿತ್ ನಾಯಕತ್ವದ ಗೆಲುವಿನ ಓಟ: ಕೆರಿಬಿಯನ್ನರಿಗೆ ಭಾರೀ ಮುಖಭಂಗ