
ಟೀಂ ಇಂಡಿಯಾ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾರನ್ನು ( Rohit Sharma) ಮತ್ತೆ ಕ್ರಿಕೆಟ್ ಅಂಗಳದಲ್ಲಿ ನೋಡುವ ಅವಕಾಶ ಸಿಗಲಿದೆ. 7 ತಿಂಗಳ ಅಂತರದ ನಂತರ ಟೀಂ ಇಂಡಿಯಾದ ಇಬ್ಬರು ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗಾಗಿ ವಿರಾಟ್ ಮತ್ತು ರೋಹಿತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇವರಿಬ್ಬರ ಆಯ್ಕೆಯಿಂದ 2027 ರ ವಿಶ್ವಕಪ್‌ನಲ್ಲಿಯೂ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆಡುವುದನ್ನು ನೋಡಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ? ಆದರೆ ತಂಡದ ಪ್ರಕಟಣೆಯ ಸಮಯದಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿದ ಅದೊಂದು ಮಾತು ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಮೂಡುವಂತೆ ಮಾಡಿದೆ.
ಅಕ್ಟೋಬರ್ 4 ರ ಶನಿವಾರ ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಸ್ವಲ್ಪ ಸಮಯದ ನಂತರ, ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡವನ್ನು ಘೋಷಿಸಲಾಯಿತು. ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದ ಅಗರ್ಕರ್ ಬಳಿ ರೋಹಿತ್ ಮತ್ತು ವಿರಾಟ್ ಅವರ ಆಯ್ಕೆ ಮತ್ತು ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು.
2027 ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಅಗರ್ಕರ್ ಬಳಿ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಅತ್ಯಂತ ಅಚ್ಚರಿಯ ಉತ್ತರವನ್ನು ನೀಡಿದ ಅಗರ್ಕರ್, ಇಬ್ಬರೂ ಈ ಬಗ್ಗೆ ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ ಎಂದರು. ಅಗರ್ಕರ್ ಅವರ ಈ ಹೇಳಿಕೆ ಎಲ್ಲರನ್ನೂ ಅಚ್ಚರಿಗೊಳಿಸಿತು, ಏಕೆಂದರೆ ಕೆಲವು ತಿಂಗಳ ಹಿಂದೆ ವಿರಾಟ್ ಮತ್ತು ರೋಹಿತ್ 2027 ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದಾಗ್ಯೂ ಇವರಿಬ್ಬರು ವಿಶ್ವಕಪ್ ಆಡುವ ಬಗ್ಗೆ ಇನ್ನು ಏನನ್ನು ಹೇಳಿಲ್ಲ ಎಂದ ಅಗರ್ಕರ್, ವಿಶ್ವಕಪ್‌ನಲ್ಲಿ ಇಬ್ಬರೂ ಆಡುವ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎಂದರು.
ಅದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿದಾಯದ ಸರಣಿಯೇ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಖಚಿತವಾಗಿ ಉತ್ತರಿಸಿದ ಅಗರ್ಕರ್ ಇದೆಲ್ಲ ಕೇವಲ ವದಂತಿ. ಇಂತಹ ಯಾವುದೇ ಸುದ್ದಿಯನ್ನು ನಾನು ಕೇಳಿಲ್ಲ ಎಂದರು.
‘ಚಾಂಪಿಯನ್ಸ್ ಟ್ರೋಫಿ ಸೋತಿದ್ದರೂ..’; ನಾಯಕತ್ವ ಬದಲಾವಣೆಯ ಬಗ್ಗೆ ಅಗರ್ಕರ್ ಹೇಳಿದ್ದಿದು
ತಂಡ ಪ್ರಕಟಿಸಿದ ಬಳಿಕ ಮತ್ತೊಂದು ಬಹುಮುಖ್ಯ ಹೇಳಿಕೆ ನೀಡಿದ ಅಗರ್ಕರ್, ಭಾರತ ಕ್ರಿಕೆಟ್ನ ಭಾಗವಾಗಿರುವ ಯಾವುದೇ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೆ, ಆತ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದರು. ಇದರರ್ಥ ರೋಹಿತ್ ಹಾಗೂ ವಿರಾಟ್ ಆಸ್ಟ್ರೇಲಿಯಾ ಪ್ರವಾಸದ ನಂತರ ದೇಶಿ ಕ್ರಿಕೆಟ್ ಆಡಲೇಬೇಕು. ಅಂದರೆ ಆಸ್ಟ್ರೇಲಿಯಾ ಪ್ರವಾಸದ ಬಳಿಕ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ಇಬ್ಬರು ಆಟಗಾರರು ಆಡಲು ಸಾಧ್ಯವಾಗುತ್ತದೆಯೇ ಅಥವಾ ಅವರಿಗೆ ಅದರಿಂದ ವಿನಾಯಿತಿ ನೀಡಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Sat, 4 October 25