IND vs AUS: ಶುಭ್ಮನ್ ಗಿಲ್ಗೆ ಏಕದಿನ ನಾಯಕತ್ವ; ವಿಶ್ವಕಪ್ ಆಡ್ತಾರಾ ರೋಹಿತ್, ಕೊಹ್ಲಿ?
Rohit Sharma, Virat Kohli future: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಏಕದಿನ ತಂಡಕ್ಕೆ ಶುಭಮನ್ ಗಿಲ್ ಹೊಸ ನಾಯಕರಾಗಿದ್ದಾರೆ, ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದರೂ, ಅವರ ಏಕದಿನ ಭವಿಷ್ಯ ಅನಿಶ್ಚಿತವಾಗಿದೆ, ವಿಶೇಷವಾಗಿ 2027ರ ವಿಶ್ವಕಪ್ ದೃಷ್ಟಿಯಿಂದ. ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿರುವುದರಿಂದ ಹಿರಿಯ ಆಟಗಾರರ ಪ್ರದರ್ಶನ ಮುಂದಿನ ನಿರ್ಧಾರಗಳಿಗೆ ನಿರ್ಣಾಯಕವಾಗಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದ ಏಕದಿನ ಮತ್ತು ಟಿ20 ತಂಡವನ್ನು (India Squad For Australia Tour) ಪ್ರಕಟಿಸಲಾಗಿದೆ. ಈ ಪ್ರವಾಸದೊಂದಿಗೆ ರೋಹಿತ್ ಶರ್ಮಾ ( Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಏಳು ತಿಂಗಳ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಆದರೆ ಅವರ ಮರಳುವಿಕೆಯ ಹೊರತಾಗಿಯೂ, ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಅದೆನೆಂದರೆ ಬಿಸಿಸಿಐ, ಏಕದಿನ ಸ್ವರೂಪಕ್ಕೆ ಹೊಸ ನಾಯಕನನ್ನು ನೇಮಿಸಿದೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ, ಟೆಸ್ಟ್ ತಂಡದ ನಾಯಕ ಮತ್ತು ಸ್ಟಾರ್ ಓಪನರ್ ಶುಭಮನ್ ಗಿಲ್ ಅವರನ್ನು ಏಕದಿನ ಸ್ವರೂಪದಲ್ಲಿಯೂ ತಂಡದ ನಾಯಕನನ್ನಾಗಿ ನೇಮಿಸಿದೆ.
ಭಾರತ ಏಕದಿನ ತಂಡಕ್ಕೆ ಹೊಸ ನಾಯಕ
ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಬಿಸಿಸಿಐನ ಹಿರಿಯ ಪುರುಷರ ಆಯ್ಕೆ ಸಮಿತಿಯು ಆಟಗಾರರ ಆಯ್ಕೆಯ ಜೊತೆಗೆ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವದ ಬಗ್ಗೆಯೂ ಬಹುದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅಂತಿಮವಾಗಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಶುಭ್ಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಿದೆ. ಇದರರ್ಥ ರೋಹಿತ್ ಶರ್ಮಾ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಜೊತೆಗೆ ವಿರಾಟ್ ಕೊಹ್ಲಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಇವರಿಬ್ಬರು ಇನ್ನೆಷ್ಟು ದಿನಗಳವರೆಗೆ ಏಕದಿನ ತಂಡದಲ್ಲಿ ಉಳಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ವಿಶ್ವಕಪ್ ಆಡ್ತಾರಾ ರೋಹಿತ್, ಕೊಹ್ಲಿ?
ಏಕೆಂದರೆ ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮಾಗೆ ಪ್ರಸ್ತುತ 38 ವರ್ಷಗಳಾಗಿದ್ದರೆ, ವಿರಾಟ್ ಕೊಹ್ಲಿಗೆ 36 ವರ್ಷ ವಯಸ್ಸಾಗಿದೆ. ಭವಿಷ್ಯದ ದೃಷ್ಟಿಯಿಂದ ಅಂದರೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಇವರಿಬ್ಬರು ಎಲ್ಲಿಯವರೆಗೆ ತಂಡದಲ್ಲಿರುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ವಿಶ್ವಕಪ್ ನಡೆಯುವ ವೇಳೆಗೆ ರೋಹಿತ್ 40ನೇ ವರ್ಷಕ್ಕೆ ಕಾಲಿಟ್ಟರೆ, ಕೊಹ್ಲಿಗೆ 38 ವರ್ಷ ವಯಸ್ಸಾಗಲಿದೆ. ಈ ವಯಸ್ಸಿನಲ್ಲಿ ಇವರಿಬ್ಬರ ಫಿಟ್ನೆಸ್ ಹೇಗಿರಲಿದೆ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಏಕದಿನ ವಿಶ್ವಕಪ್ ವೇಳೆಗೆ ತಂಡವನ್ನು ಬಲಿಷ್ಠಗೊಳಿಸುವ ಸಲುವಾಗಿ ಬಿಸಿಸಿಐ, ನಾಯಕತ್ವ ಬದಲಾವಣೆ ಮಾಡಿದೆ. ಇದರರ್ಥ ರೋಹಿತ್, ಕೊಹ್ಲಿ ಅವರ ಸ್ಥಾನ ವಿಶ್ವಕಪ್ವರೆಗೆ ಹಾಗೆಯೇ ಮುಂದುವರೆಯುತ್ತದಾ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಗಿಲ್ಗೆ ಏಕದಿನ ನಾಯಕತ್ವ
ಹೊಸಬರತ್ತ ಬಿಸಿಸಿಐ ಚಿತ್ತ
2027 ರ ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸವನ್ನು ಸೇರಿದಂತೆ ಒಟ್ಟು 8 ಏಕದಿನ ಸರಣಿಗಳನ್ನಾಡಲಿದೆ. ಹೀಗಾಗಿ ತಂಡಕ್ಕೆ ಯುವ ಆಟಗಾರರ ಆಗಮನವಾಗಲು ಇನ್ನು ಸಾಕಷ್ಟು ಸಮಯವಿದೆ. ಇದಕ್ಕೆ ಪೂರಕವಾಗಿ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹಾಗೆಯೇ ಟಿ20 ಸೂಪರ್ ಸ್ಟಾರ್ ಅಭಿಷೇಕ್ ಶರ್ಮಾರನ್ನು ಏಕದಿನ ತಂಡದಲ್ಲಿ ಆಡಲಿಸಲು ಬಿಸಿಸಿಐ ಚಿಂತಿಸುತ್ತಿದೆ. ಹೀಗಾಗಿಯೇ ಅವರಿಗೆ ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದೆ. ಅಂದರೆ ರೋಹಿತ್ ಶರ್ಮಾ ಬದಲಿಗೆ ಆರಂಭಿಕನಾಗಿ ಅಭಿಷೇಕ್ ಶರ್ಮಾರನ್ನು ಬಿಸಿಸಿಐ ನೋಡುತ್ತಿದೆ.
ಇತ್ತ ಏಕದಿನದಲ್ಲಿ ಮೂರನೇ ಕ್ರಮಾಂಕದ ಜೀವಾಳವಾಗಿರುವ ವಿರಾಟ್ ಕೊಹ್ಲಿ ಕೂಡ ಏಕದಿನ ವಿಶ್ವಕಪ್ವರೆಗೆ ಆಡುತ್ತಾರೆ ಎಂದು ಖಚಿತವಾಗಿ ಹೇಳಲು ಕಷ್ಟ. ಏಕೆಂದರೆ ಶ್ರೇಯಸ್ ಅಯ್ಯರ್ಗೆ ಉಪನಾಯಕತ್ವದ ಜವಾಬ್ದಾರಿ ನೀಡುವ ಮೂಲಕ ಬಿಸಿಸಿಐ, ಅವರಿಗೆ 3ನೇ ಕ್ರಮಾಂಕದ ಜವಾಬ್ದಾರಿ ನೀಡಿ, ಆಲ್ರೌಂಡರ್ಗಳ ವಿಭಾಗದಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹಾರ್ದಿಕ್ ಪಾಂಡ್ಯರನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಆಸ್ಟ್ರೇಲಿಯಾ ಪ್ರವಾಸಕ್ಕೆ ಹಾರ್ದಿಕ್ ಆಯ್ಕೆಯಾಗದಿದ್ದರೂ, ಅವರನ್ನು ಏಕದಿನ ತಂಡದಿಂದ ಹೊರಗಿಡಲು ಸಾಧ್ಯವಿಲ್ಲ. ಇದರ ಜೊತೆಗೆ ಇಂಜುರಿಗೊಂಡಿರುವ ರಿಷಭ್ ಪಂತ್ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇವರಿಬ್ಬರ ಚೇತರಿಕೆಯ ನಂತರ ಏಕದಿನ ತಂಡದಲ್ಲಿ ಬದಲಾವಣೆಗಳಾಗುವುದಂತೂ ಖಚಿತ.
ತವರಿನಲ್ಲಿ 6 ಏಕದಿನ ಸರಣಿ
ಟೀಂ ಇಂಡಿಯಾ ಆಡಿಲಿರುವ 8 ಏಕದಿನ ಸರಣಿಗಳಲ್ಲಿ ಕೇವಲ 2 ಸರಣಿಗಳನ್ನು ಮಾತ್ರ ತವರಿನಿಂದ ಹೊರಗೆ ಆಡಲಿದೆ. ಉಳಿದ 6 ಸರಣಿಗಳು ಭಾರತದಲ್ಲೇ ನಡೆಯಲಿವೆ. ಹೀಗಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ಸರಣಿಗಳಲ್ಲಿ ಅಭಿಷೇಕ್, ಜೈಸ್ವಾಲ್, ಹಾರ್ದಿಕ್, ರಿಷಭ್ ಪಂತ್ರನ್ನು ಕಣಕ್ಕಿಳಿಸುವ ಮೂಲಕ ಅವರ ಫಾರ್ಮ್ ಅನ್ನು ಬಿಸಿಸಿಐ ಪರೀಕ್ಷಿಸಬಹುದು. ಒಂದು ವೇಳೆ ಅವರು ಆಯ್ಕೆ ಮಂಡಳಿಯನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರೆ, ಇತ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್, ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಫಲರಾದರೆ, ಬಿಸಿಸಿಐಗೆ ತಂಡದಲ್ಲಿ ಬದಲಾವಣೆ ಮಾಡಲು ಮುಕ್ತ ಪರವಾನಗಿ ಸಿಕ್ಕಂತ್ತಾಗುತ್ತದೆ. ಆಗ ಇವರಿಬ್ಬರು ಮಾಜಿ ನಾಯಕರನ್ನು ಏಕದಿನ ತಂಡದಿಂದ ಕೈಬಿಡಬಹುದು.
ತಂಡಕ್ಕೆ ಬೇಕಿದೆ ಅನುಭವಿಗಳ ಅನುಭವ
ಆದಾಗ್ಯೂ 2027 ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆ ಆತಿಥ್ಯದಲ್ಲಿ ನಡೆಯುತ್ತಿರುವ ಕಾರಣ, ಈ ಇಬ್ಬರು ಅನುಭವಿ ದಿಗ್ಗಜ ಆಟಗಾರರನ್ನು ತಂಡದಿಂದ ಹೊರಗಿಟ್ಟು ಟೀಂ ಇಂಡಿಯಾ ಈ ವಿಶ್ವ ಸಮರಕ್ಕೆ ಕಾಲಿಡುವ ಧೈರ್ಯವನ್ನು ಮಾಡುವ ಸಾಧ್ಯತೆಗಳು ಕಡಿಮೆ. ಆದರೆ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾರನ್ನೇ ಬೆಂಚ್ ಕಾಯಿಸಿದ ಬಿಸಿಸಿಐಗೆ ಇಂತಹ ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಹೀಗಿರುವಾಗ ಈ ಇಬ್ಬರು ಆಟಗಾರರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಅವರು ವಿಶ್ವಕಪ್‌ನಲ್ಲಿ ಆಡುತ್ತಾರಾ? ಇಲ್ಲವಾ ಎಂಬುದು ನಿರ್ಧಾರವಾಗಲಿದೆ.
ರೋಹಿತ್, ಕೊಹ್ಲಿಗೆ ಕೊನೆಯ ಆಸ್ಟ್ರೇಲಿಯಾ ಪ್ರವಾಸ
ಇದೆಲ್ಲದರ ಹೊರತಾಗಿ ರೋಹಿತ್ ಹಾಗೂ ಕೊಹ್ಲಿಗೆ ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಲಿದೆ. ಏಕೆಂದರೆ ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ಪ್ರವಾಸದ ಬಳಿಕ ಭಾರತ ತಂಡ 2027 ರ ಏಕದಿನ ವಿಶ್ವಕಪ್ ಮುಗಿದ ಬಳಿಕವಷ್ಟೇ ಆಸ್ಟ್ರೇಲಿಯಾಕ್ಕೆ ಹೋಗಬಹುದು. ಹೀಗಾಗಿ ಇವರಿಬ್ಬರು ಆಟಗಾರರು ಏಕದಿನ ವಿಶ್ವಕಪ್ ಆಡಿದರೂ ಸಹ ಆ ಬಳಿಕ ಇವರಿಬ್ಬರಿಗೆ ಮತ್ತೆ ಏಕದಿನ ತಂಡದಲ್ಲಿ ಸ್ಥಾನ ಸಿಗುವುದು ಅಸಾಧ್ಯ. ಹೀಗಿರುವಾಗ ಭಾರತ ಕ್ರಿಕೆಟ್ಗೆ ಮತ್ತೊಂದು ಆಯಾಮ ನೀಡಿದ ಈ ಇಬ್ಬರು ದಿಗ್ಗಜರು ಕಾಂಗರೂಗಳ ನಾಡಲ್ಲಿ ಅಬ್ಬರಿಸಿ ಬೊಬ್ಬಿರಿಯಲಿ, ಈ ಮೂಲಕ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಂತ್ತಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Sat, 4 October 25
