AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಪೈರಸಿ ಕಾಪಿ ಡೌನ್​ಲೋಡ್ ಮಾಡಿದವರಿಗೂ ಎದುರಾಗಲಿದೆ ಸಂಕಷ್ಟ

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮೊದಲೇ ಲೀಕ್ ಆಗಿದೆ. ಪೈರಸಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಚಿತ್ರತಂಡ ಮುಂದಾಗಿದೆ. ಪೈರಸಿ ಕಾಪಿ ಡೌನ್​ಲೋಡ್ ಮಾಡಿದವರಿಗೂ ಸಂಕಷ್ಟ ಎದುರಾಗಲಿದೆ. ಐಪಿ ಅಡ್ರೆಸ್ ಮೂಲಕ ಅಂಥವರನ್ನು ಪತ್ತೆ ಹಚ್ಚುವ ಪ್ರಯತ್ನ ಜಾರಿಯಲ್ಲಿದೆ.

‘ಜನ ನಾಯಗನ್’ ಪೈರಸಿ ಕಾಪಿ ಡೌನ್​ಲೋಡ್ ಮಾಡಿದವರಿಗೂ ಎದುರಾಗಲಿದೆ ಸಂಕಷ್ಟ
Thalapathy VijayImage Credit source: KVN Productions
ಮದನ್​ ಕುಮಾರ್​
|

Updated on: Apr 12, 2026 | 7:12 AM

Share

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ ವೃತ್ತಿಜೀವನದ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ (Jana Nayagan) ಬಿಡುಗಡೆಗೂ ಮುನ್ನವೇ ಪೈರಸಿ ಕಾಟಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿಯೊಂದಿಗೆ ಚಿತ್ರತಂಡ ಸುದೀರ್ಘ ಹೋರಾಟ ನಡೆಸುತ್ತಿರುವ ನಡುವೆಯೇ, ಚಿತ್ರದ ಸಂಪೂರ್ಣ ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್ ನೀಡಿದೆ. ಈ ದುರದೃಷ್ಟಕರ ಘಟನೆಯ ಬೆನ್ನಲ್ಲೇ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅಧಿಕೃತ ಪ್ರಕಟಣೆ ಹೊರಡಿಸಿದೆ. ‘ಜನ ನಾಯಗನ್’ ಸಿನಿಮಾದ ಪೈರಸಿ (Piracy) ಕಾಪಿ ಡೌನ್​ಲೋಡ್ ಮಾಡುವವರಿಗೂ ಎಚ್ಚರಿಕೆ ನೀಡಲಾಗಿದೆ.

ಪೈರಸಿ ಹಿಂದೆ ಇರುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ತಿಳಿಸಿದೆ. ಲೀಕ್ ಆಗಿರುವ ದೃಶ್ಯಗಳನ್ನು ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು ಅಥವಾ ಸಂಗ್ರಹಿಸಿಡುವುದು ಅಪರಾಧ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಹಂಚಿಕೊಳ್ಳುವುದು ಅಥವಾ ಫಾರ್ವರ್ಡ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಈ ಪೈರಸಿ ಜಾಲವನ್ನು ಭೇದಿಸಲು ಆ್ಯಂಟಿ ಪೈರಸಿ ಕಂಪನಿ ‘WarX’ ಅಖಾಡಕ್ಕೆ ಇಳಿದಿದೆ. ಮೂಲತಃ ಚಿತ್ರದ ಪ್ರಿಂಟ್ ಅನ್ನು ಅನಧಿಕೃತವಾಗಿ ಯಾರು ಲೀಕ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಈ ಸಂಸ್ಥೆಯು ಟೊರೆಂಟ್ ಡೌನ್‌ಲೋಡ್ ಮಾಡುವವರ ಐಪಿ (IP) ಅಡ್ರೆಸ್‌ಗಳನ್ನು ಕೂಡ ಸಂಗ್ರಹಿಸುತ್ತಿದೆ.

ಟೊರೆಂಟ್ ಮೂಲಕ ಸಿನಿಮಾ ಡೌನ್‌ಲೋಡ್ ಮಾಡುವವರ ಐಪಿ ವಿಳಾಸಗಳು ಪತ್ತೆಯಾಗುವುದರಿಂದ, ಡೌನ್‌ಲೋಡ್ ಮಾಡಿದ ಸಾಮಾನ್ಯ ಜನರಿಗೂ ನೋಟಿಸ್ ಬರುವ ಸಾಧ್ಯತೆ ಇದೆ. ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಇಂತಹ ಕ್ರಮಗಳು ಸಾಮಾನ್ಯವಾಗಿದ್ದರೂ, ಭಾರತದಲ್ಲಿ ಇದು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಜಾರಿಯಾಗುವ ಸೂಚನೆ ನೀಡಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಗಳ ಪ್ರಕಾರ, ಕಾಪಿರೈಟ್ ಉಲ್ಲಂಘಿಸಿ ಕಂಟೆಂಟ್ ಡೌನ್‌ಲೋಡ್ ಮಾಡುವವರ ಮೇಲೆ ಐಟಿ ಕಾಯ್ದೆ 2000 ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು WarX ಪ್ರತಿಪಾದಿಸುತ್ತಿದೆ. ಲಕ್ಷಾಂತರ ಮಂದಿ ಡೌನ್‌ಲೋಡ್ ಮಾಡುವಾಗ ಪ್ರತಿಯೊಬ್ಬರ ಮೇಲೆ ಕ್ರಮ ಕೈಗೊಳ್ಳುವುದು ಪ್ರಾಯೋಗಿಕವಾಗಿ ಕಷ್ಟವಾದರೂ, ಡೌನ್‌ಲೋಡ್ ಮಾಡಿದವರನ್ನು ಪತ್ತೆಹಚ್ಚುವುದರಿಂದ ಚಿತ್ರರಂಗದಲ್ಲಿ ಒಂದು ಬಲಿಷ್ಠ ಕಾನೂನು ಮಾದರಿಯನ್ನು ರೂಪಿಸಲಿದೆ.

ಇದನ್ನೂ ಓದಿ: ‘ಜನ ನಾಯಗನ್’ ಯಾಕೆ ವಿಳಂಬ ಆಗಿದೆ ಅಂತ ಕೇಳಿದ್ದಕ್ಕೆ ಸೈಲೆಂಟ್ ಆದ ರಜನಿಕಾಂತ್

ಸಿನಿಮಾ ಬಿಡುಗಡೆಯ ವಿಳಂಬದ ನಡುವೆಯೇ ಈ ಪೈರಸಿ ಆಗಿರುವುದು ‘ಜನ ನಾಯಗನ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಅಭಿಮಾನಿಗಳು ಪೈರಸಿಯನ್ನು ಪ್ರೋತ್ಸಾಹಿಸದೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಬೇಕೆಂದು ಚಿತ್ರತಂಡ ಮನವಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us