
ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ಭೀತಿಯಿಂದಾಗಿ ಐಪಿಎಲ್ (IPL) ಟೂರ್ನಿಯನ್ನು ಬಿಸಿಸಿಐ ಸ್ಥಗಿತಗೊಳಿಸಿದ ಬೆನ್ನಲ್ಲೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮೌನ ಮುರಿದಿದ್ದಾರೆ. ಭಾರತೀಯ ಸೇನೆ ಪರ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ ಅವರು, ನಾವು ಒಗ್ಗಟ್ಟಾಗಿರುತ್ತೇವೆ. ಭಾರತೀಯ ಸೇನೆಗೆ ಸೆಲ್ಯೂಟ್ ಎಂದಿದ್ದಾರೆ. ಇದರೊಂದಿಗೆ, ಐಪಿಎಲ್ ಸ್ಥಗಿತದ ನಂತರ ಮೊದಲ ಬಾರಿಗೆ ಕೊಹ್ಲಿ ಪ್ರತಿಕ್ರಿಯೆ ನೀಡಿದಂತಾಗಿದೆ.
‘‘ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವುದಕ್ಕಾಗಿ ಭಾರತೀಯ ಸೇನೆಗೆ ಸೆಲ್ಯೂಟ್. ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮ ವೀರ ಯೋಧರ ಅಚಲ ಧೈರ್ಯ, ಅವರು ಮತ್ತು ಅವರ ಕುಟುಂಬದವರು ನಮ್ಮ ದೇಶಕ್ಕಾಗಿ ಮಾಡುವ ತ್ಯಾಗಗಳಿಗೆ ನಾವು ಸದಾ ಕೃತಜ್ಞರಾಗಿರುತ್ತೇವೆ’’ ಎಂದು ವಿರಾಟ್ ಕೊಹ್ಲಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಆ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಜಮ್ಮು ಮತ್ತು ಪಠಾಣ್‌ಕೋಟ್ ಸೇರಿದಂತೆ ಗಡಿಯುದ್ದಕ್ಕೂ ಇರುವ ಅನೇಕ ನಗರಗಳು, ಪಂಜಾಬ್ ಮತ್ತು ರಾಜಸ್ಥಾನದ ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿಗೆ ವಿಫಲ ಯತ್ನ ನಡೆಸಿತ್ತು. ಪಾಕಿಸ್ತಾನದ ಯತ್ನವನ್ನು ಭಾರತೀಯ ಸೇನೆ ಯಶಸ್ವಿಯಾಗಿ ತಡೆದಿತ್ತು. ಅದಾದ ಬೆನ್ನಲ್ಲೇ ಐಪಿಎಲ್ ಪಂದ್ಯ ಧರ್ಮಶಾಲಾದಲ್ಲಿ ರದ್ದಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕೊಹ್ಲಿ ಅವರು ಸೇನೆ ಪರ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನ ಸ್ಥಿತಿಯ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಟೂರ್ನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಶುಕ್ರವಾರ ನಿರ್ಧರಿಸಿದೆ. ಗುರುವಾರ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂದ್ಯವನ್ನು ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅರ್ಧಕ್ಕೆ ರದ್ದುಗೊಳಿಸಲಾಯಿತು. ಗಡಿಗೆ ಹತ್ತಿರದಲ್ಲಿರುವ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಿಂದ ಆಟಗಾರರು ಮತ್ತು ಪ್ರೇಕ್ಷಕರನ್ನು ಸ್ಥಳಾಂತರಿಸಲಾಯಿತು.
ಇದನ್ನೂ ಓದಿ: ದೇಶಕ್ಕಿಂತ ಕ್ರಿಕೆಟ್ ದೊಡ್ಡದಲ್ಲ: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ
ಈ ಬಾರಿ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದು, ಕಪ್ ಗೆಲ್ಲಬಹುದಾದ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಈ ಮೂಲಕ 18 ವರ್ಷಗಳ ಕಪ್ ಗೆಲ್ಲುವ ಕನಸು ನನಸಾಗಲಿದೆ ಎಂದು ಆರ್ಸಿಬಿ ಅಭಿಮಾನಿಗಳು ಭಾವಿಸಿದ್ದರು. ಆದರೆ, ಈಗ ಐಪಿಎಲ್ ಪಂದ್ಯವೇ ಸ್ಥಗಿತವಾಗಿರುವುದು ಅಭಿಮಾನಿಗಳ ಕನಸಿಗೆ ತಣ್ಣೀರು ಎರಚಿದಂತೆ ಆಗಿದೆ. ಆದರೆ, ಇಷ್ಟೆಲ್ಲ ಆದರ ಹೊರತಾಗಿಯೂ ಕೊಹ್ಲಿ ಮಾತ್ರ ತಾವು ದೇಶದ, ಸೇನೆಯ ಪರ ಎಂಬ ಸಂದೇಶ ರವಾನಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ