
ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ಸಂವಹನ ಕೊರತೆಯನ್ನು ನಿವಾರಿಸಲು ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಬಿಸಿಸಿಐ “ಟ್ರಬಲ್‌ಶೂಟರ್” ಆಗಿ ಕಳುಹಿಸಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇತ್ತೀಚೆಗಷ್ಟೇ ಅಜಿತ್ ಅಗರ್ಕರ್ ಅವರ ನಿರ್ಗಮನದ ನಂತರ ಬಿಸಿಸಿಐನ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡಿರುವ ಪ್ರಗ್ಯಾನ್ ಓಜಾ, ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನವೇ ಕೊಹ್ಲಿ ಮತ್ತು ಗಂಭೀರ್ ನಡುವಿನ ಮನಸ್ತಾಪವನ್ನು ಬಗೆಹರಿಸುವ ರಹಸ್ಯ ಕಾರ್ಯಾಚರಣೆಯಲ್ಲಿದ್ದರು ಎಂದು ವರದಿಗಳು ತಿಳಿಸಿವೆ.
ಕಳೆದ ಕೆಲವು ಸಮಯದಿಂದ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ನೇರ ಸಂವಹನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ಇಬ್ಬರು ದಿಗ್ಗಜರ ನಡುವಿನ “ಶೀತಲ ಸಮರ” ತಂಡದ ವಾತಾವರಣದ ಮೇಲೆ ಪರಿಣಾಮ ಬೀರದಂತೆ ತಡೆಯಲು ಬಿಸಿಸಿಐ ಹಿರಿಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು.
ಈ ಗಂಭೀರ ಸಮಸ್ಯೆಯನ್ನು ಶಮನಗೊಳಿಸಲು ಬಿಸಿಸಿಐ ಆಯ್ಕೆ ಮಾಡಿಕೊಂಡಿದ್ದು ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು. ಪ್ರಗ್ಯಾನ್ ಓಜಾ ಪ್ರಸ್ತುತ ತಂಡದಲ್ಲಿರುವ ಹಿರಿಯ ಆಟಗಾರರೊಂದಿಗೆ ಅತ್ಯಂತ ಆಪ್ತ ಸಂಬಂಧವನ್ನು ಹೊಂದಿದ್ದಾರೆ. ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ಓಜಾ ಒಟ್ಟಿಗೆ ಭಾರತ ತಂಡಕ್ಕಾಗಿ 22 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಹೀಗಾಗಿ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಕ್ಕಾಗಿ ರಾಯ್‌ಪುರಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಪ್ರಗ್ಯಾನ್ ಓಜಾ ಅವರು ವಿರಾಟ್ ಕೊಹ್ಲಿ ಜೊತೆ ಸುದೀರ್ಘ ಹಾಗೂ ಅತ್ಯಂತ ಗಂಭೀರವಾದ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಇದೇ ವೇಳೆ ಹೆಡ್ ಕೋಚ್ ಗೌತಮ್ ಗಂಭೀರ್ ಕೊಂಚ ದೂರದಲ್ಲಿ ಪ್ರತ್ಯೇಕವಾಗಿ ಕುಳಿತಿದ್ದರು. ಈ ವಿಡಿಯೋ ಹೊರಬಂದ ಬೆನ್ನಲ್ಲೇ, ಕೊಹ್ಲಿ ಮತ್ತು ಗಂಭೀರ್ ನಡುವಿನ ಮನಸ್ತಾಪವನ್ನು ತಿಳಿಗೊಳಿಸಲು ಓಜಾ ಅವರು ಸಂಧಾನಕಾರನ ಪಾತ್ರ ವಹಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಕ್ರಿಕೆಟ್ ವಲಯದ ಮೂಲಗಳ ಪ್ರಕಾರ, ಬಿಸಿಸಿಐ ಬಿಕ್ಕಟ್ಟಿನ ಸಮಯದಲ್ಲಿ ಓಜಾ ಅವರನ್ನು ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಜಿತ್ ಅಗರ್ಕರ್ ಮುಖ್ಯ ಆಯ್ಕೆಗಾರರಾಗಿದ್ದಾಗ, ಹಿರಿಯ ಆಟಗಾರ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತು ಆಯ್ಕೆ ಸಮಿತಿಯ ನಿರ್ಧಾರವನ್ನು ಅವರಿಗೆ ತಲುಪಿಸುವ ಜವಾಬ್ದಾರಿಯನ್ನೂ ಓಜಾ ಅವರೇ ಹೊತ್ತಿದ್ದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟ್ರೇಡ್ಗೆ ಬಿಗ್ ಟ್ವಿಸ್ಟ್: ಖರೀದಿಗೆ ಮುಂದಾದ ಮತ್ತೊಂದು ಫ್ರಾಂಚೈಸಿ
ಸದ್ಯಕ್ಕೆ ಬಿಸಿಸಿಐ ಮತ್ತು ಆಟಗಾರರು ಈ ಭಿನ್ನಾಭಿಪ್ರಾಯಗಳನ್ನು ಕೇವಲ ವದಂತಿ ಎಂದು ತಳ್ಳಿಹಾಕುತ್ತಿದ್ದರೂ, ಒಳಗೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಪ್ರಗ್ಯಾನ್ ಓಜಾ ಅವರಿಗೆ ಕೇವಲ ಆಟಗಾರರ ಆಯ್ಕೆಯಷ್ಟೇ ಅಲ್ಲದೆ, ತಂಡದಲ್ಲಿ ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿಯನ್ನು ಬಿಸಿಸಿಐ ನೀಡಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಹಿರಿಯ ಆಟಗಾರರು ಮತ್ತು ಕೋಚ್ ನಡುವೆ ಸಮನ್ವಯ ಸಾಧಿಸುವುದು ಹೊಸ ಆಯ್ಕೆ ಸಮಿತಿಗೆ ಅಗ್ನಿಪರೀಕ್ಷೆಯಾಗಿದೆ.
Published On - 8:38 am, Tue, 20 October 26