IND vs WI: ಟಿ20 ಸರಣಿಯಿಂದಲೂ ವಿರಾಟ್ ಕೊಹ್ಲಿ ಔಟ್..!

Team India: ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರು ವಿಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

IND vs WI: ಟಿ20 ಸರಣಿಯಿಂದಲೂ ವಿರಾಟ್ ಕೊಹ್ಲಿ ಔಟ್..!
Virat Kohli
Edited By:

Updated on: Jul 07, 2022 | 1:59 PM

ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಮುಂದಿನ ತಿಂಗಳು ನಡೆಯಲಿರುವ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಆಯ್ಕೆ ಮಾಡಲಾಗಿದೆ. ಈ ಸರಣಿಗೆ ಭಾರತ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ಜಸ್​ಪ್ರೀತ್ ಬುಮ್ರಾ (Jasprit Bumrah) ಸೇರಿದಂತೆ ಪ್ರಮುಖ ಆಟಗಾರರು ವಿಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದಾದ ಬಳಿಕ ಕೆರಿಬಿಯನ್ನರ ನಾಡಲ್ಲಿ 5 ಪಂದ್ಯಗಳ ಟಿ20 ಸರಣಿ ಕೂಡ ನಡೆಯಲಿದೆ. ಈ ಸರಣಿಯ ಮೂಲಕ ಟೀಮ್ ಇಂಡಿಯಾದ ಹಿರಿಯ ಆಟಗಾರರು ಕಂಬ್ಯಾಕ್ ಮಾಡಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಟಿ20 ಸರಣಿಯಲ್ಲೂ (T20 Cricket) ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.

ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಸರಣಿಯ ವೇಳೆ ವಿಶ್ರಾಂತಿ ಬಯಸಿದ್ದು, ಹೀಗಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಗೆ ವಿಶ್ರಾಂತಿ ಏಕೆ ನೀಡಲಾಗುತ್ತಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಒಂದು ಕಾರಣ ಇತ್ತೀಚೆಗೆ ವಿರಾಟ್ ಕೊಹ್ಲಿಯ ಕೋಚ್ ನೀಡಿರುವ ಹೇಳಿಕೆ.

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯ ತಂಡ ಪ್ರಕಟವಾದ ಬೆನ್ನಲ್ಲೇ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ಅಗತ್ಯವಿಲ್ಲ. ಅವರಿಗೆ ಏಕೆ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಪ್ರಶ್ನಿಸಿದ್ದರು. ಇದೀಗ ಟಿ20 ಸರಣಿಯಿಂದ ಕೂಡ ಖುದ್ದು ವಿರಾಟ್ ಕೊಹ್ಲಿಯೇ ವಿಶ್ರಾಂತಿ ಬಯಸಿದ್ದಾರೆ ಎಂಬ ಸುದ್ದಿಯು ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಏಕೆಂದರೆ ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಗೆ ಫಾರ್ಮ್​ಗೆ ಮರಳಲು ಮುಂಬರುವ ಸರಣಿಗಳು ಮುಖ್ಯವಾಗಿದೆ. ಇದಾಗ್ಯೂ ವಿರಾಟ್ ಕೊಹ್ಲಿಗೆ ಬಿಸಿಸಿಐ ವಿಶ್ರಾಂತಿ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತಿದೆ. ವಿರಾಟ್ ಕೊಹ್ಲಿ ಬಹಳ ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. 2019 ರ ಬಳಿಕ ಅವರು ಒಂದೇ ಒಂದು ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿಲ್ಲ. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲೂ ಕೇವಲ 31 ರನ್ ಮಾತ್ರ ಕಲೆಹಾಕಿದ್ದರು. ಇದಕ್ಕೂ ಮುನ್ನ ಸೌತ್ ಆಫ್ರಿಕಾ ವಿರುದ್ದದ ಸರಣಿಯ ವೇಳೆ ವಿಶ್ರಾಂತಿ ನೀಡಲಾಗಿತ್ತು. ಹಾಗೆಯೇ ಇತ್ತೀಚೆಗೆ ನಡೆದ ಐಪಿಎಲ್ 2022 ರಲ್ಲೂ ಕೊಹ್ಲಿಯ ಬ್ಯಾಟ್ ಮೌನವಾಗಿತ್ತು.

ಇದೀಗ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಟಿ20 ಸರಣಿ ಹಾಗೂ ಏಕದಿನ ಸರಣಿ ಆಡಲು ಸಜ್ಜಾಗಿದೆ. ಆದರೆ ಈ ಸರಣಿಯಲ್ಲಿ ಕೊಹ್ಲಿ ಆಡಬೇಕಿರುವುದು ಕೇವಲ 5 ಪಂದ್ಯಗಳನ್ನು ಮಾತ್ರ. ಆದರೆ ಅತ್ತ ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ವಿರಾಟ್ ಕೊಹ್ಲಿಯ ಮುಂದಿದೆ. ಇದಾಗ್ಯೂ ವೆಸ್ಟ್ ಇಂಡೀಸ್ ವಿರುದ್ದದ 8 ಪಂದ್ಯಗಳ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸಿದ್ದಾರೆ ಎಂಬ ಸುದ್ದಿಯು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಯನ್ನು ನಿಧಾನವಾಗಿ ತಂಡದಿಂದ ಕೈ ಬಿಡಲಾಗುತ್ತಿದ್ಯಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:
ಶಿಖರ್ ಧವನ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.